ತುಮಕೂರು: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆಶಾ ಕಾರ್ಯಕರ್ತೆಯರನ್ನು ಪದೇ ಪದೆ ಪರೀಕ್ಷೆಗೆ ಒಳಪಡಿಸಬೇಕು. ಅವಶ್ಯಕತೆ ಇರುವಂತಹ ಸ್ಯಾನಿಟೈಸರ್, ಮಾಸ್ಕ್ಗಳನ್ನು ನೀಡಬೇಕು. ಸರ್ಕಾರದಿಂದ ಗೌರವ ಹಾಗೂ ಪ್ರೋತ್ಸಾಹಧನ ಬರುತ್ತಿದ್ದು, ಈ ಬಿಡಿ ಬಿಡಿಯಾದ ಹಣ ಬಿಟ್ಟು ಒಟ್ಟಾರೆಯಾಗಿ ತಿಂಗಳಿಗೆ 12,000 ರೂ. ನಿಗದಿತ ಸಂಬಳ ನೀಡಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಂಘಟನಾಕಾರರಾದ ಮಂಜುಳಾ ಒತ್ತಾಯಿಸಿದರು.
ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 12,000 ರೂ. ನಿಗದಿತ ಸಂಬಳ ನೀಡವಂತೆ ಒತ್ತಾಯ
ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 12,000 ರೂ. ನಿಗದಿತ ಸಂಬಳ ನೀಡಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಂಘಟನಾಕಾರರಾದ ಮಂಜುಳಾ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10 ವರ್ಷಗಳಿಂದ ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆದರೆ ಇಲ್ಲಿಯವರೆಗೂ ಸಹ ಸರ್ಕಾರ ಇವರಿಗೆ ಕನಿಷ್ಠ ವೇತನ ನಿಗದಿ ಮಾಡಿಲ್ಲ. ಕಳೆದ ಜನವರಿಯಿಂದ ಜೂನ್ ತಿಂಗಳವರೆಗೂ ಸೇರಿ ಸರ್ಕಾರಕ್ಕೆ 10 ಬಾರಿ ಮನವಿ ಪತ್ರ ಸಲ್ಲಿಸಲಾಗಿದ್ದು, ಇಲ್ಲಿಯವರೆಗೂ ಆ ಮನವಿ ಪತ್ರಗಳಿಗೆ ಸಕಾರಾತ್ಮಕವಾದ ಸ್ಪಂದನೆ ದೊರೆತಿಲ್ಲ ಎಂದರು.
ರಾಜ್ಯದಲ್ಲಿರುವ ಶಾಸಕರಿಗೆ, ಸಂಸದರಿಗೆ, ಜಿಲ್ಲಾ ಪಂಚಾಯತ್ ಸದಸ್ಯರಿಗೆ, ತಾಲೂಕು ಪಂಚಾಯತ್ ಸದಸ್ಯರಿಗೆ ನಮ್ಮ ಮನವಿಗಳನ್ನು ನೀಡಿ ಆ ಮೂಲಕ ಸರ್ಕಾರಕ್ಕೆ ಒತ್ತಡ ತರಲಾಗುವುದು. ಆಗಲೂ ಸರ್ಕಾರ ನಮ್ಮ ಒತ್ತಡಕ್ಕೆ ಮಣಿಯದಿದ್ದರೆ ಜುಲೈ 10ರಿಂದ ಆಶಾ ಕಾರ್ಯಕರ್ತೆಯರು ಕೆಲಸವನ್ನು ಸ್ಥಗಿತಗೊಳಿಸಿ ತಮ್ಮ ಹೋರಾಟವನ್ನು ಮುಂದುವರೆಸಲಾಗುವುದು ಎಂದು ತಿಳಿಸಿದರು.