ಭಟ್ಕಳ:ಕೆಲವು ದಿನಗಳ ಹಿಂದಷ್ಟೇ ತಾಲೂಕಿನ ಹನೀಫಾಬಾದ್ನಲ್ಲಿ ಅಪ್ರಾಪ್ತೆಯೊಬ್ಬಳು ಲೈಂಗಿಕ ದೌರ್ಜನ್ಯದಿಂದ ಗರ್ಭಿಣಿಯಾಗಿದ್ದು, ದೌರ್ಜನ್ಯ ನಡೆಸಿದ ಆರೋಪದಡಿ ಅಪ್ರಾಪ್ತೆಯ ಅಕ್ಕನ ಗಂಡ ಖಾಜಿ ಇಬ್ರಾಹಿಂ ಶಾಬ್ ಎಂಬಾತನೇ ಆರೋಪಿಯಾಗಿದ್ದು, ಅತ್ತೆಯೇ ತನಿಖೆಯ ಹಾದಿ ತಪ್ಪಿಸಿದ ವಿಚಾರ ಬಯಲಾಗಿದೆ.
ಪೊಲೀಸರ ದಿಕ್ಕು ತಪ್ಪಿಸಲು ಅಪ್ರಾಪ್ತೆಯ ತಾಯಿ ಈ ಮೊದಲು ಉತ್ತರ ಪ್ರದೇಶದ ಮೂಲದ ಸಾಹಿಲ್ ಎಂಬ ಯುವಕ ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂದು ಸುಳ್ಳು ದೂರು ನೀಡಿದ್ದಳು. ಈ ದೂರಿನನ್ವಯ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಸಾಹಿಲ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಹಾಗೂ ಸಂತ್ರಸ್ತೆ ಗರ್ಭಿಣಿ ಎಂದು ತಿಳಿಯುತ್ತಿರುವಂತೆ ಆತ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಕೊಳ್ಳಲಾಗಿತ್ತು.
ನಿಜವಾದ ಆರೋಪಿ ಸಂತ್ರಸ್ತೆಯ ಭಾವ:
ದೂರು ಸಲ್ಲಿಸಿದ ಬಳಿಕ ಪ್ರಕರಣ ಬೆನ್ನಟ್ಟಿದ ಸಿಪಿಐ ಪ್ರಕಾಶ ಹಾಗೂ ಗ್ರಾಮೀಣ ಠಾಣೆ ಪೊಲೀಸರು ಸಂತ್ರಸ್ತೆಯ ಮನೆಯ ಸುತ್ತಮುತ್ತ ಕೆಲ ಮಾಹಿತಿಯನ್ನು ಕಲೆಹಾಕಿದ್ದಾರೆ. ಈ ವೇಳೆ ಸಂತ್ರಸ್ತೆಯ ಅಕ್ಕನ ಗಂಡನ ಮೇಲೆ ಅನುಮಾನ ಮೂಡಿದೆ. ಇದೇ ವೇಳೆ ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತೆಯನ್ನು ಉಡುಪಿಯ ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ಆಸ್ಪತ್ರೆ ವೈದ್ಯರು ಸಂತ್ರಸ್ತೆ ಅಥವಾ ಮಗು ಇಬ್ಬರಲ್ಲಿ ಒಬ್ಬರು ಮಾತ್ರ ಬದುಕುವ ಸಾಧ್ಯತೆ ಇರುವ ಬಗ್ಗೆ ಖಚಿತ ಪಡಿಸಿದ್ದರಿಂದ ಸಂತ್ರಸ್ತೆ ಬದುಕುಳಿಯುತ್ತಾಳೆ.
ಸಂತ್ರಸ್ತೆಯ ಆರೋಗ್ಯ ವಿಚಾರಿಸಲು ಬಂದಿದ್ದ, ದೌರ್ಜನ್ಯ ನಡೆಸಿದ ಆರೋಪಿ ಖಾಜಿ ಇಬ್ರಾಹಿಂ ಶಾಬನ ನಡೆ ಬಗ್ಗೆ ಅನುಮಾನಗೊಂಡ ಪೊಲೀಸರು ಉಡುಪಿಯಲ್ಲಿ ಬಂಧಿಸಿ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ತಾನೇ ಆಕೆಯ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ನಂತರ ಸಂತ್ರಸ್ತೆಯ ತಾಯಿ ಅಳಿಯನ ನಿಜರೂಪ ಯಾರಿಗೂ ತಿಳಿಯಬಾರದು ಎಂದು ಸಾಹಿಲ್ ಹೆಸರು ಹೇಳಿ ಪ್ರಕರಣವನ್ನು ಮರೆಮಾಚಲು ಪ್ರಯತ್ನಿಸಿದ್ದನ್ನು ಈಗ ಒಪ್ಪಿಕೊಂಡಿದ್ದಾನೆ.
ಆರೋಪಿ ತನ್ನ ಹೆಂಡತಿಯನ್ನು ತನ್ನ ಮನೆಗೆ ಕಳುಹಿಸಿಕೊಟ್ಟು, ಈಗ ಅತ್ತೆಯ ಮನೆಯಲ್ಲಿಯೇ ವಾಸವಿದ್ದು ಕೆಲಸ ಮಾಡಿಕೊಂಡಿದ್ದ. ಈ ವೇಳೆ ಮನೆಯ ಮಂದಿಯೆಲ್ಲಾ ಕೆಲಸಕ್ಕೆಂದು ಹೋದ ವೇಳೆ ತನ್ನ ಹೆಂಡತಿ ತಂಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ಆರೋಪಿಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಕಾರವಾರ ಸಬ್ ಜೈಲಿಗೆ ಕರೆದೊಯ್ದಿದ್ದಾರೆ.