ಮಂಡ್ಯ: ತಾನು ಹುಟ್ಟಿ ಬೆಳೆದ ತನ್ನ ಜಿಲ್ಲೆಯ ಜನರು ಕೊರೊನಾ ಆರ್ಭಟದಲ್ಲಿ ಪ್ರಾಣವಾಯು ಕೊರತೆಯಿಂದ ನರಳಿದ್ದನ್ನು ಕಂಡ ನಿರ್ಮಾಪಕ ವಿಜಯ್ ಕಿರಗಂದೂರು, ಆಕ್ಸಿಜನ್ ಘಟಕಗಳನ್ನು ನಿರ್ಮಿಸಿ ಕೊಡುವುದಾಗಿ ಮಾತು ನೀಡಿದ್ದರು. ಇದೀಗ ಕೊಟ್ಟ ಮಾತಿನಂತೆ ಆಕ್ಸಿಜನ್ ಪ್ಲಾಂಟ್ ನಿರ್ಮಿಸಿ ನುಡಿದಂತೆ ನಡೆದಿದ್ದಾರೆ.
ಸಕ್ಕರೆ ನಾಡು ಮಂಡ್ಯದಲ್ಲಿ ಕೋವಿಡ್ ಎರಡನೇ ಅಲೆ ವ್ಯಾಪಿಸಿ, ಸೋಂಕಿತರ ಸಂಖ್ಯೆ ಹೆಚ್ಚಾಗಿತ್ತು. ಅಲ್ಲದೇ ಆಕ್ಸಿಜನ್ ಕೊರತೆಯಿಂದ ನೂರಾರು ಜನರು ಸಾವನ್ನಪ್ಪಿದ್ದರು. ಈ ವೇಳೆ ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ತವರು ಜಿಲ್ಲೆಯ ಜನರಿಗಾಗಿ ಬಳಸುವ ಆಸೆಯಿಂದ ಔಷಧಿಗಳು ಹಾಗೂ ಆಕ್ಸಿಜನ್ ಘಟಕವನ್ನು ಮಂಡ್ಯ ಮೂಲದ ನಿರ್ಮಾಪಕ, ಕೆಜಿಎಫ್ ಸಿನಿಮಾದ ಸಾರಥಿ ವಿಜಯ್ ಕಿರಗಂದೂರು ಅವರು ಹೊಂಬಾಳೆ ಗ್ರೂಪ್ಸ್ ಮೂಲಕ ನಿರ್ಮಿಸಿ ಕೊಡುವುದಾಗಿ ಹೇಳಿದ್ರು.
ಅದರಂತೆ 'ಹೊಂಬಾಳೆ ಗ್ರೂಪ್' ಮೂಲಕ ಸುಮಾರು 1.80 ಕೋಟಿ ರೂ. ವೆಚ್ಚದಲ್ಲಿ ಕೆಆರ್ ಪೇಟೆ ಮತ್ತು ಪಾಂಡವಪುರದಲ್ಲಿ ತಲಾ 400 ಎಲ್‌ಪಿಎಂ ಸಾಮರ್ಥ್ಯದ ಎರಡು ಆಕ್ಸಿಜನ್ ಪ್ಲಾಂಟ್‌ಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇದಕ್ಕೆ ಅಗತ್ಯ ವಿದ್ಯುತ್ ಸಂಪರ್ಕವನ್ನೂ ಕಲ್ಪಿಸಿದ್ದಾರೆ. ಈ ಆಮ್ಲಜನಕ ಘಟಕವನ್ನ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ್ ನಾರಾಯಣ, ಕ್ರೀಡಾ ಮತ್ತು ರೇಷ್ಮೆ ಸಚಿವ ಕೆ ಸಿ ನಾರಾಯಣಗೌಡ ಉದ್ಘಾಟಿಸಿದರು.