ಕರ್ನಾಟಕ

karnataka

ETV Bharat / state

ವಿದ್ಯಾಗಮ ಕಾರ್ಯಕ್ರಮ ನಿಲ್ಲಿಸದಿದ್ದರೆ ವಿಧಾನಸೌಧದ ಮುಂದೆ ಪ್ರತಿಭಟನೆ: ಹೆಚ್‌ಡಿಕೆ

ಸೋಮವಾರದ ಒಳಗೆ‌ ವಿದ್ಯಾಗಮ ಕಾರ್ಯಕ್ರಮವನ್ನು ಸ್ಥಗಿತ ಮಾಡದಿದ್ದರೆ ಸರ್ಕಾರದ ವಿರುದ್ಧ ಧರಣಿ ನಡೆಸುತ್ತೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Hdk
Hdk

By

Published : Oct 10, 2020, 1:34 PM IST

ಬೆಂಗಳೂರು : ಶಿಕ್ಷಕರ ಜೀವದ ಜೊತೆ ಆಟ ಆಡುವುದನ್ನು ರಾಜ್ಯ ಸರ್ಕಾರ ಕೂಡಲೇ ನಿಲ್ಲಿಸಬೇಕು. ವಿದ್ಯಾಗಮ ಕಾರ್ಯಕ್ರಮ ಕೂಡಲೇ ನಿಲ್ಲಿಸದಿದ್ದರೆ ವಿಧಾನಸೌಧ ಅಥವಾ ಸಿಎಂ ನಿವಾಸದ ಬಳಿ ಪ್ರತಿಭಟನೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ಚಾಮಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಈಗಾಗಲೇ 100 ಕ್ಕೂ ಹೆಚ್ಚು‌ ಶಿಕ್ಷಕರು ಕೊರೊನಾಗೆ ಬಲಿಯಾಗಿದ್ದಾರೆ. ಸರ್ಕಾರ ಇದನ್ನು ಹುಡುಗಾಟಿಕೆ ಮಾಡಿಕೊಳ್ಳಬಾರದು. ಸರ್ಕಾರಕ್ಕೆ ಮನುಷ್ಯತ್ವ ಇದೆಯಾ? ಎಂಬ ಅನುಮಾನ ಬರುತ್ತಿದೆ. ಸರ್ಕಾರ ಸೋಮವಾರದ ಒಳಗೆ‌ ವಿದ್ಯಾಗಮ ಕಾರ್ಯಕ್ರಮ ಸ್ಥಗಿತ ಮಾಡದಿದ್ದರೆ ಸರ್ಕಾರದ ವಿರುದ್ಧ ಧರಣಿ ನಡೆಸುತ್ತೇನೆ. ಜೊತೆಗೆ ಕೊರೊನಾಗೆ ಬಲಿಯಾದ ಶಿಕ್ಷಕರ ಕುಟುಂಬಕ್ಕೆ ಪರಿಹಾರ ಹಾಗೂ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡುವಂತೆ ಹೆಚ್‌ಡಿಕೆ ಆಗ್ರಹಿಸಿದ್ದಾರೆ.

ವಿದ್ಯಾಗಮಕ್ಕೆ ಹಾಜರಾಗದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವ ಬೆದರಿಕೆ ಹಾಕಲಾಗಿದೆ ಎನ್ನಲಾಗುತ್ತಿದ್ದು, ಇದಕ್ಕೆ ಶಿಕ್ಷಕ ವರ್ಗ‌ ಹೆದರಬೇಕಿಲ್ಲ. ಶಿಕ್ಷಕರ ಪರ ಹೋರಾಟ ಮಾಡಲು ನಾನು‌ ಸಿದ್ಧ. ವೇತನ ಹಾಗೂ ಸೌಲಭ್ಯಗಳ ಕಡಿತದ ಬೆದರಿಕೆ ಒಡ್ಡಿ ಸಾವಿನ ದವಡೆಗೆ ನೂಕಿದ ಶಿಕ್ಷಕರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮಕ್ಕಳಿಗೆ ಶಿಕ್ಷಣ ಕೊಡುವ ಸೋಗಿನಲ್ಲಿ ಶಿಕ್ಷಣ ಸಚಿವರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆಗಳನ್ನು ನೀಡುತ್ತಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ತರುತ್ತಿರುವುದು ಖಂಡನೀಯ ಹಾಗೂ ಅಮಾನವೀಯ. ಈ ವರ್ಷ ಶಾಲೆ ಆರಂಭಿಸದಿದ್ದರೆ ದೇಶ ಮುಳುಗಿ ಹೋಗುತ್ತದೆಯೇ?, ಇಂತಹದೊಂದು ಹುಚ್ಚಾಟ ಸರ್ಕಾರಕ್ಕೆ ಬೇಕಾ?, ಇದೊಂದು ನಾಗರಿಕ ಸರ್ಕಾರವೇ? ಎಂದು ಟೀಕಿಸಿದ್ದಾರೆ.

ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿರುವ ಸರ್ಕಾರ ಕನಿಷ್ಠ ಆಕ್ಸಿಜನ್ ಒದಗಿಸಲು ಪರದಾಡುತ್ತಿದೆ. ಸಾಮಾನ್ಯ ಪ್ರಜೆಯ ಜೀವ ರಕ್ಷಣೆ ಮಾಡಬೇಕಾದದ್ದು ಸರ್ಕಾರದ ಮೊದಲ ಆದ್ಯತೆ ಮತ್ತು ಕರ್ತವ್ಯ. ನನ್ನ ಜೀವ ಹೋದರು ಪರವಾಗಿಲ್ಲ, ಮಂಗಳವಾರದಿಂದ ಸರ್ಕಾರದ ಅನಾಗರಿಕ, ನಿರ್ಲಕ್ಷ್ಯ ನೀತಿ, ನಿರ್ಧಾರದ ವಿರುದ್ಧ ಅಹೋರಾತ್ರಿ ಧರಣಿ ಆರಂಭಿಸುತ್ತೇನೆ ಎಂದು ಹೇಳಿದ್ದಾರೆ.

ABOUT THE AUTHOR

...view details