ಬೆಂಗಳೂರು: ಈ ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ಸರ್ವಾಧಿಕಾರದ ಯುಗವನ್ನು ಪ್ರಾರಂಭಿಸಿದ್ದು ಕಾಂಗ್ರೆಸ್ಸಿನ ಅಧಿನಾಯಕಿಯಾಗಿದ್ದ ಇಂದಿರಾ ಗಾಂಧಿಯವರೇ ಹೊರತು, ಬೇರೆ ಪಕ್ಷದ ಮೊರಾರ್ಜಿ ದೇಸಾಯಿ ಅಥವಾ ವಾಜಪೇಯಿ ಅವರಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ.
ಕೆ.ಪಿ.ಸಿ.ಸಿ. ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ತಮ್ಮ ಕಾಂಗ್ರೆಸ್ ವರಿಷ್ಠಾಧಿಪತಿಗಳ ವಂಶ ಪಾರಂಪರ್ಯದತ್ತವಾದ ಅಧಿಕಾರ ಲಾಲಸೆಯನ್ನು ಸಮರ್ಥಿಸುವ ಭರದಲ್ಲಿ ವಿನಾಕಾರಣ ಬಿಜೆಪಿ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸಿದ್ದು ವಿಪರ್ಯಾಸ. ಮೋದಿ ಸರ್ಕಾರದ ಸರ್ವಾಧಿಕಾರಿ ನೀತಿಯನ್ನು ಎದುರಿಸಲು ಕಾಂಗ್ರೆಸ್ಸಿಗೆ ಗಾಂಧಿ ಪರಿವಾರದ ನಾಯಕತ್ವವೇ ಅನಿವಾರ್ಯ ಎಂದು ದಿನೇಶ್ ಗುಂಡೂರಾವ್ ಹೇಳಿದ್ದು ನಿಜಕ್ಕೂ ಹಾಸ್ಯಾಸ್ಪದ. ಪಾಪ, ದಿನೇಶ್ ಗುಂಡೂರಾವ್ ಗೆ ಕಾಂಗ್ರೆಸ್ಸಿನ ಇತಿಹಾಸದ ಬಗ್ಗೆ ಜಾಣ ಮರೆವು ಇದ್ದಿರಬಹುದು. ಈ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮೊದಲ ಬಾರಿಗೆ ಸಂವಿಧಾನದತ್ತವಾದ ಮೂಲಭೂತ ಹಕ್ಕುಗಳನ್ನೇ ಕಿತ್ತುಕೊಂಡು ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿ ಅಸಂಖ್ಯಾತ ಅಮಾಯಕರನ್ನು ಜೈಲಿಗೆ ತಳ್ಳಿದ ಕರಾಳ ಘಟನೆ ನಿಮಗೆ ಸರ್ವಾಧಿಕಾರಿ ಧೋರಣೆಯೆಂದು ಅನ್ನಿಸಿಲ್ಲವೇ? ಗಾಜಿನ ಮನೆಯಲ್ಲಿ ಕುಳಿತು ಕಲ್ಲೆಸೆಯುವುದಕ್ಕೆ ತಾವು ಯಾಕೆ ಮುಂದಾಗುತ್ತೀರಿ ಎಂದು ದಿನೇಶ್ ಗುಂಡೂರಾವ್ ಅವರನ್ನು ಸವದಿ ಪ್ರಶ್ನಿಸಿದ್ದಾರೆ.
ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಈ ರೀತಿಯ ಸರ್ವಾಧಿಕಾರಿ ಧೋರಣೆಗೆ ಶ್ರೀಕಾರ ಹಾಕಿದ ಇಂದಿರಾ ಗಾಂಧಿಯವರ ಪರಂಪರೆ ಕಾಂಗ್ರೆಸ್ಸಿನಲ್ಲಿ ಇಂದಿಗೂ ವಂಶವಾಹಿನಿಯಾಗಿ ಹರಿದು ಬಂದಿದೆ ಎಂಬುದಕ್ಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಗಾದಿ ಏರಲು “ಅಮ್ಮ-ಮಗನ” ಬಿಟ್ಟರೆ ಬೇರೆ ಯಾರಿಗೂ ಈಗ ಯೋಗ-ಯೋಗ್ಯತೆ ಒದಗಿ ಬರುತ್ತಿಲ್ಲ ಎಂಬುದೇ ಸಾಕ್ಷಿಯಾಗಿದೆ. ಮೋದಿಯವರ ಸರ್ಕಾರದ್ದು ಸರ್ವಾಧಿಕಾರಿ ನೀತಿ ಎಂದು ಆರೋಪಿಸಿರುವ ನೀವು ಯಾವ ಆಧಾರವನ್ನು ಇಟ್ಟುಕೊಂಡು ಈ ರೀತಿ ಜನತೆಯಲ್ಲಿ ತಪ್ಪು ಸಂದೇಶ ಬೀರುತ್ತಿದ್ದೀರಿ?, ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ “ಸರ್ವಾಧಿಕಾರಿತನ” ತೋರಿಸಿದ ಒಂದೇ ಒಂದು ಉದಾಹರಣೆಯನ್ನು ತಾವು ಕೊಡಬಲ್ಲಿರಾ?, ಎಂದು ಡಿಸಿಎಂ ಸವದಿ ಸವಾಲೆಸೆದಿದ್ದಾರೆ.
ಹಿಂದೆ ಲೋಕಸಭಾ ಚುನಾವಣೆಗಳು ನಡೆದಾಗ ಎರಡೆರಡು ಬಾರಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ಪ್ರಜಾಪ್ರಭುತ್ವದ ಪಥದಲ್ಲಿಯೇ ಸರ್ಕಾರ ರಚಿಸಿ, ಮೇಕ್ ಇನ್ ಇಂಡಿಯಾದಿಂದ ಹಿಡಿದು ಕಿಸಾನ್ ಸಮ್ಮಾನ್ ತನಕ ನೂರಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ನಿಮ್ಮ ಕಾಮಾಲೆ ಕಣ್ಣಿಗೆ “ಸರ್ವಾಧಿಕಾರಿ ನೀತಿ” ಯಾಗಿ ಕಂಡು ಬಂತೇ?, ನಿಮ್ಮ ಪ್ರಕಾರ ಮೋದಿ ಸರ್ಕಾರವನ್ನು ಎದುರಿಸಿ ನಿಲ್ಲಲು ಗಾಂಧಿ ಪರಿವಾರದ ನಾಯಕತ್ವವೇ ಅನಿವಾರ್ಯವೆಂದು ತಾವು ಹೇಳಿರುವುದು ಹಾಸ್ಯಾಸ್ಪದ. ಏಕೆಂದರೆ ಒಂದು ವೇಳೆ ಮೋದಿ ಸರ್ಕಾರವನ್ನು ಸಮರ್ಥವಾಗಿ ಎದುರಿಸುವ ತಾಕತ್ತು ನಿಮ್ಮ ಗಾಂಧಿ ಪರಿವಾರಕ್ಕೆ ಇದ್ದಿದ್ದರೆ, ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲೂ ಕಾಂಗ್ರೆಸ್ ಹಿಂದೆಂದೂ ಇಲ್ಲದಂತೆ ಹೀನಾಯ ಸೋಲುಂಡಿದ್ದು ಹೇಗೆ ಎಂದು ದಿನೇಶ್ ಗುಂಡೂರಾವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪುಲ್ವಾಮಾ ಘಟನೆಯಲ್ಲಿ ಬಿಜೆಪಿ ನಡೆಸಿದ ಭಾವನಾತ್ಮಕ ಪ್ರಚಾರವೇ 2019ರಲ್ಲಿ ಕಾಂಗ್ರೆಸ್ ಸೋಲಲು ಕಾರಣವೆಂದು ತಾವು ಕುಂಟು ನೆಪವೊಡ್ಡಿ ನಿಮ್ಮ ಗಾಂಧಿ ಪರಿವಾರದ ಅಸಮರ್ಥತೆಯನ್ನು ಮರೆಮಾಚಲು ಪ್ರಯತ್ನಿಸಿದ್ದೀರಿ. ಹಾಗಿದ್ದರೆ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ತಾವು ಯಾವ ಕಾರಣ ನೀಡುತ್ತೀರಿ. ದೇಶ ರಕ್ಷಣೆ ವಿಚಾರಕ್ಕೂ ಚುನಾವಣಾ ರಾಜಕೀಯಕ್ಕೂ ತಾವು ತಳಕು ಹಾಕುತ್ತಾ ಗಾಂಧಿ ಪರಿವಾರದ ಕೃಪೆಗೆ ಪಾತ್ರರಾಗಬೇಕೆಂದು ಹವಣಿಸುತ್ತಿರುವುದು ಅತ್ಯಂತ ದುರ್ದೈವದ ಸಂಗತಿಯಾಗಿದೆ ಎಂದು ಸವದಿ ವಾಗ್ದಾಳಿ ನಡೆಸಿದ್ದಾರೆ.
ಇನ್ನು ರಾಹುಲ್ ಗಾಂಧಿ ಅತ್ಯಂತ ಸಮರ್ಥ ನಾಯಕ ಎಂದು ತಾವು ಪದೇ ಪದೇ ಬಿಂಬಿಸುತ್ತಿದ್ದರೂ, ರಾಹುಲ್ ಅವರ ಸಾಮರ್ಥ್ಯದ ಸಾಲಿನಲ್ಲಿ ನಾವು ಮೋದಿ ಅವರಂತಹ ದಿಟ್ಟ ಮುತ್ಸದ್ಧಿತನದ ನಾಯಕನನ್ನು ಹೋಲಿಕೆ ಮಾಡುವುದಿಲ್ಲ. ಈ ದೇಶದ ಮಹಾಜನತೆಯೇ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಪತ್ರಿಕಾ ಹೇಳಿಕೆ ಮೂಲಕ ಕೈ ನಾಯಕರಿಗೆ ಟಾಂಗ್ ನೀಡಿದ್ದಾರೆ ಡಿಸಿಎಂ.
ಕಾಂಗ್ರೆಸ್ಸಿಗೆ ಯಾರು ಅಧಿನಾಯಕರಾಗಬೇಕೆಂಬ ವಿಚಾರಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಏಕೆಂದರೆ ಅದು ನಿಮ್ಮ ಪಕ್ಷದ ಆಂತರಿಕ ವಿಚಾರ. ಅಷ್ಟೇ ಅಲ್ಲ, ತಾವು “ಅನ್ಯಥಾ ಶರಣಂ ನಾಸ್ತಿ” ಎನ್ನುತ್ತಿದ್ದರೂ ತಮ್ಮ ಪಕ್ಷದವರೇ ಆದ 23 ಮಂದಿ ಹಿರಿಯ ನಾಯಕರು ಈ ಬಗ್ಗೆ ಈಗಾಗಲೇ ಪ್ರತಿಕ್ರಿಯಿಸಿದ್ದಾರೆ. ಅವರ ಪ್ರತಿಕ್ರಿಯೆಯಲ್ಲಿ ತಮಗೆ ಸತ್ಯದ ಹೂರಣ ಕಂಡಿಲ್ಲದಿರುವುದು ಆಶ್ಚರ್ಯವೇ ಸರಿ. ನೀವು ನಿಮ್ಮ ನಾಯಕರಿಗೆ ಬಹು ಪರಾಕ್ ಹೇಳಲು ನಮ್ಮ ಅಭ್ಯಂತರವೇನಿಲ್ಲ. ಆದರೆ ಈ ಸಂದರ್ಭದಲ್ಲಿ ಸತ್ಯದ ಮೇಲೆ ಸುತ್ತಿಗೆ ಹೊಡೆದಂತೆ ನಮ್ಮ ಬಿಜೆಪಿ ಸರ್ಕಾರದ ಮೇಲೆ ಅನಗತ್ಯವಾಗಿ ಆರೋಪಿಸುವುದು ಎಷ್ಟು ಸರಿ?, ಟೀಕೆಗೂ ನೀತಿ ಬೇಡವೇ ಎಂದು ದಿನೇಶ್ ಗುಂಡೂರಾವ್ ವಿರುದ್ಧ ಡಿಸಿಎಂ ಲಕ್ಷ್ಮಣ ಸವದಿ ಟೀಕಾ ಪ್ರಹಾರ ನಡೆಸಿದ್ದಾರೆ.