ಹಾಸನ: ಹಳೆ ದ್ವೇಷದ ಹಿನ್ನೆಲೆ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ಬಾಗೂರು ಸರ್ಕಲ್ನಲ್ಲಿ ಸಂಭವಿಸಿದೆ.
ಚನ್ನರಾಯಪಟ್ಟಣದ ಎ.ಡಿ.ಕಾಲೋನಿ ನಿವಾಸಿಯಾಗಿರೋ ಅಭಿಷೇಕ್ (25) ಕೊಲೆಯಾದವನು. ಕಳೆದ ಆರು ತಿಂಗಳ ಹಿಂದೆ ನಾಗ ಸಮುದ್ರದ ಗಾರೆ ಕುಮಾರಸ್ವಾಮಿ ಎಂಬುವವರನ್ನು ಕೊಲೆಗೈದು ಅಭಿಷೇಕ್ ಜೈಲು ಸೇರಿದ್ದ. ಜೂನ್ 17 ಕ್ಕೆ ಅಭಿಷೇಕ ಜೈಲಿನಿಂದ ಬಿಡುಗಡೆಯಾಗಿದ್ದ.
ಸದ್ಯ ಅಭಿಷೇಕ ಕೊಲೆಯ ಸುತ್ತ ಅನುಮಾನದ ಹುತ್ತವೇ ಹುಟ್ಟುಕೊಡಿದೆ. ಹಳೆ ದ್ವೇಷದ ಹಿನ್ನೆಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿರಬಹುದು ಎಂಬವ ಶಂಕೆ ಒಂದೆಡೆಯಾದರೆ, ಇನ್ನೊಂದೆಡೆ ಕಳೆದ ಭಾನುವಾರ ಹೊಳಗೆರೆಯಮ್ಮನ ಜಾತ್ರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಹತ್ಯೆ ಮಾಡಿರಬಹುದೆಂದು ಎಂಬ ಅನುಮಾನ ವ್ಯಕ್ತವಾಗಿದೆ.
ಸ್ನೇಹಿತ ದೀಪು ಎಂಬುವವನ ಜತೆ ಬೈಕ್ನಲ್ಲಿ ಹೋಗುವಾಗ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದರು. ಈ ವೇಳೆ ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಭಿಷೇಕನನ್ನು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆತರುವ ವೇಳೆ ಮಾರ್ಗ ಮಧ್ಯೆ ಉದಯಪುರ ಗೇಟ್ ಬಳಿ ಅಭಿಷೇಕ ಸಾವನ್ನಪ್ಪಿದ್ದಾನೆ.
ಈ ಕುರಿತು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎರಡು ತಂಡಗಳನ್ನು ರಚಿಸಿ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.