ಕರ್ನಾಟಕ

karnataka

ETV Bharat / state

ಮಲೆನಾಡಿಗರ ಮೂಗಿಗೆ ತುಪ್ಪ ಸವರಿದ ಬಿಎಸ್‌ವೈ: ಅಸಮಾಧಾನ

ಈ ಬಾರಿ ಮತೊಮ್ಮೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು, ಶಿವಮೊಗ್ಗ ಜಿಲ್ಲೆಗೆ ಅನುದಾನದ ಮಹಾಪೂರವೇ ಹರಿದು ಬರಲಿದೆ. ಇನ್ನಷ್ಟು ಸ್ಮಾರ್ಟ್ ಆಗಿ ಅಭಿವೃದ್ದಿಯಾಗಲಿದೆ ಅಂದುಕೊಂಡಿದ್ದ ಮಲೆನಾಡಿಗರಿಗೆ ಬಿಎಸ್‌ವೈ ಬಜೆಟ್ ಶಾಕ್ ನೀಡಿದೆ. ಯಡಿಯೂರಪ್ಪನವರೇ ಆರಂಭಿಸಿದ ವಿಮಾನ ನಿಲ್ದಾಣ ಕಾಮಗಾರಿಗೆ ಈ ಬಜೆಟ್‌ನಲ್ಲಿ ದೊಡ್ಡ ಅನುದಾನ ಸಿಗಬಹುದು ಎಂಬ ಲೆಕ್ಕಾಚಾರ ತಲೆಕೆಳಗಾಗಿದೆ.

What Shimoga got in the budget:
ಬಿಎಸ್‌ವೈ

By

Published : Mar 6, 2020, 11:15 AM IST

ಶಿವಮೊಗ್ಗ : ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗಕ್ಕೆ ಬಾರಿ ಅನುದಾನ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಅಭಿವೃದ್ದಿ ಕಾಮಗಾರಿಗಳ ಮಹಾಪೂರವೇ ಹರಿದು ಬರಲಿದೆ ಎಂಬ ಮಲೆನಾಡಿಗರ ಬೆಟ್ಟದಷ್ಟು ನಿರೀಕ್ಷೆ ನೀರಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅನುದಾನ, ಭದ್ರಾವತಿಯ ಜೀವನಾಡಿ ಎಂಪಿಎಂ ಹಾಗೂ ವಿಐಎಸ್‌ಎಲ್ ಕಾರ್ಖಾನೆ ಪುನಶ್ಚೇತನಕ್ಕೆ ಅನುದಾನ ಸೇರಿದಂತೆ ನಾನಾ ಕಾಮಗಾರಿಗಳಿಗೆ ಕೋಟ್ಯಂತರ ರೂ. ಅನುದಾನ ಸಿಗಬಹುದು ಎಂಬ ಲೆಕ್ಕಾಚಾರ ಉಲ್ಟಾ ಆಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಬಿ.ಎಸ್ ಯಡಿಯೂರಪ್ಪನವರು ಸಾಕಷ್ಟು ಅನುದಾನ ನೀಡಿ ಜಿಲ್ಲೆಯ ಅಭಿವೃದ್ದಿಯ ಕಾರಣಕರ್ತರಲ್ಲಿ ಒಬ್ಬರಾಗಿದ್ದರು.

ಈ ಬಾರಿ ಮತೊಮ್ಮೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು, ಜಿಲ್ಲೆಗೆ ಅನುದಾನದ ಮಹಾಪೂರವೇ ಹರಿದು ಬರಲಿದೆ. ಶಿವಮೊಗ್ಗ ಇನ್ನಷ್ಟು ಸ್ಮಾರ್ಟ್ ಆಗಿ ಅಭಿವೃದ್ದಿಯಾಗಲಿದೆ ಅಂದುಕೊಂಡಿದ್ದ ಮಲೆನಾಡಿಗರಿಗೆ ಬಿಎಸ್‌ವೈ ಬಜೆಟ್ ಶಾಕ್ ನೀಡಿದೆ. ಯಡಿಯೂರಪ್ಪನವರೇ ಆರಂಭಿಸಿದ ವಿಮಾನ ನಿಲ್ದಾಣ ಕಾಮಗಾರಿಗೆ ಈ ಬಜೆಟ್‌ನಲ್ಲಿ ದೊಡ್ಡ ಅನುದಾನ ಸಿಗಬಹುದು ಎಂಬ ಲೆಕ್ಕಾಚಾರ ತಲೆಕೆಳಗಾಗಿದೆ. ಈಗಾಗಲೇ ವಿಮಾನ ನಿಲ್ದಾಣ ಕಾಮಗಾರಿಗೆ ಒಂದಿಷ್ಟು ಅನುದಾನ ಕೊಟ್ಟಿದ್ದಾರೆ. ಇನ್ನಷ್ಟು ಹೆಚ್ಚಿನ ಅನುದಾನ ಸಿಕ್ಕರೆ ಬೇಗ ವಿಮಾನ ಕಾಮಗಾರಿ ಮುಗಿದು ಲೋಹದ ಹಕ್ಕಿಗಳು ಹಾರಾಡುತ್ತವೆ ಎಂಬ ನಿರೀಕ್ಷೆ ಹುಸಿಯಾಗಿದೆ.

ಇನ್ನು ಭದ್ರಾವತಿಯ ಜೀವನಾಡಿಯಾಗಿರುವ ಎಂಪಿಎಂ ಹಾಗೂ ವಿಐಎಸ್‌ಎಲ್ ಕಾರ್ಖಾನೆಗಳ ಪುನಶ್ಚೇತನಕ್ಕೆ ಮುಖ್ಯಮಂತ್ರಿಯವರು ಬಜೆಟ್‌ನಲ್ಲಿ ಕೊಡುಗೆ ನೀಡಬಹುದು ಎಂದು ಎಲ್ಲರೂ ಕಾಯುತ್ತಿದ್ದರು. ಅಲ್ಲದೇ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಸಂಸದ ಬಿ.ವೈ ರಾಘವೇಂದ್ರ, ಎಂಪಿಎಂ ಕಾರ್ಖಾನೆಯ ಸಾಲವನ್ನು ಸರ್ಕಾರದಿಂದಲೇ ತೀರಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಜೊತೆಗೆ ಪರ್ಯಾಯ ಉತ್ಪನ್ನಗಳ ಚಿಂತನೆಯನ್ನು ಮುಂದಿಟ್ಟು ಅದಕ್ಕೆ ಯಡಿಯೂರಪ್ಪ ಅಸ್ತು ಎಂದಿದ್ದರು. ಮುಖ್ಯಮಂತ್ರಿಗಳು ಈ ಬಾರಿಯಾದರೂ ಬಜೆಟ್‌ನಲ್ಲಿ ಎಂಪಿಎಂ ಹಾಗೂ ವಿಐಎಸ್‌ಎಲ್‌ಗೆ ಪುನಶ್ಚೇತನ ನೀಡಿ ರೋಗಗ್ರಸ್ಥ ಎಂಬ ಹಣೆಪಟ್ಟಿಯಿಂದ ಈ ಎರಡು ಕಾರ್ಖಾನೆಗಳು ಹೊರಬರಬಹುದು ಎಂಬ ಜಿಲ್ಲೆಯ ಜನರ ಕನಸು ಈಡೇರಲೇ ಇಲ್ಲ.

ಶಿವಮೊಗ್ಗದ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸುಧಾರಣೆಗೆ ಅನುದಾನ, ಶಿವಮೊಗ್ಗದ ಸೋಗಾನೆಯಲ್ಲಿ ಆಯರ್ವೇದ ವಿಶ್ವವಿದ್ಯಾಲಯ ಸ್ಥಾಪನೆಗೆ ಅನುದಾನ ಹಾಗೂ ಶಿವಮೊಗ್ಗ ಸರ್ಕಾರಿ ನೌಕರರ ವಸತಿ ಗೃಹಗಳ ನಿರ್ಮಾಣಕ್ಕೆ ನೆರವು ಮತ್ತು ಆನವಟ್ಟಿ, ಹೊಳೆಹೊನ್ನೂರು, ಕುಂಸಿ ಗ್ರಾಮ ಪಂಚಾಯತ್​ಗಳನ್ನು ಪಟ್ಟಣ ಪಂಚಾಯತ್​ಗಳಾಗಿ ಪರಿವರ್ತನೆ ಹಾಗೂ ನನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಸಾಕಷ್ಟು ಅನುದಾನ ಸಿಗಬಹುದೆಂಬ ನಂಬಿಕೆ ಹುಸಿಯಾಗಿದೆ.

ಶಿವಮೊಗ್ಗಕ್ಕೆ ಬಜೆಟ್‌ನಲ್ಲಿ ಸಿಕ್ಕಿದ್ದೇನು: ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಯನ್ನು ಗಮನದಲ್ಲಿಟ್ಟುಕೊಂಡು ಶಿವಮೊಗ್ಗದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ. ಸಾಗರ ತಾಲೂಕಿನ ಇರುವಕ್ಕಿಯಲ್ಲಿ 787 ಎಕರೆ ಜಾಗದಲ್ಲಿ 155 ಕೋಟಿ ವೆಚ್ಚದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಅನುದಾನ. ಬುಡಕಟ್ಟು ವೈದ್ಯ ಪದ್ಧತಿಗೆ ಪೂರಕವಾಗಿ ಔಷಧಿ ತಯಾರಿಕೆಗೆ ಶಿವಮೊಗ್ಗದಲ್ಲಿ ಔಷಧಿ ತಯಾರಿಕಾ ಘಟಕ ಸ್ಥಾಪನೆ. ಅಡಿಕೆ ಬೆಳೆಗಾರರಿಗೆ ಗರಿಷ್ಟ 2 ಲಕ್ಷ ಸಾಲಕ್ಕೆ ಶೇ.೫ರಷ್ಟು ಬಡ್ಡಿ ವಿನಾಯಿತಿ. ತ್ಯಾವರೆಕೊಪ್ಪ ಸಿಂಹಧಾಮಕ್ಕೆ 5 ಕೋಟಿ ರೂ. ಅನುದಾನ. ಮಲೆನಾಡಿನ ರೈತರ ಬೆಳೆಗಳಿಗೆ ಮಾರಕವಾಗಿರುವ ಮಂಗಗಳ ಕಾಟ ತಡೆಯಲು ಶಿವಮೊಗ್ಗದಲ್ಲಿ ಮಂಕಿ ಪಾರ್ಕ್ ನಿರ್ಮಾಣ ಮತ್ತು ಪುನರ್ವಸತಿಗಾಗಿ 1.25 ಕೋಟಿ ಮೀಸಲು. ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗಳಿಗೆ ಮತ್ತು ಕೆರೆ ತುಂಬಿಸುವ ಯೋಜನೆಗಳಿಗೆ ನೀರಾವರಿ ಇಲಾಖೆಯಿಂದ ಅನುದಾನ. ಶಿವಮೊಗ್ಗ - ಶಿಕಾರಿಪುರ -ರಾಣೆಬೆನ್ನೂರು ಹೊಸ ರೈಲ್ವೇ ಯೋಜನೆಗೆ ರಾಜ್ಯ ಸರ್ಕಾರದಿಂದ ಶೇ.50ರಷ್ಟು ಹಣ ಮೀಸಲು.

ಶಿವಮೊಗ್ಗದಲ್ಲಿ ಹೆಲ್ತ್ ​ ಆ್ಯಂಡ್ ವೆಲ್‌ನೆಸ್ ಹಾಗೂ ಧಾರವಾಡದಲ್ಲಿ ಹೆಲ್ತ್​ ಆ್ಯಂಡ್ ಪರ್ಸನಲ್ ಕೇರ್ ಕನ್ಸ್ಯೂಮರ್ ಗೂಡ್ಸ್ ಮ್ಯಾನ್ಯೂಫ್ಯಾಕ್ಚರಿಂಗ್ ಕ್ಲಸ್ಟರ್ ಅಭಿವೃದ್ಧಿ. ಪಾರಂಪರಿಕ ವೈದ್ಯಪದ್ದತಿ ಮತ್ತು ಆಚರಣೆಗಳನ್ನು ದಾಖಲು ಮಾಡಲು ಮತ್ತು ಆಯ್ದ ಔಷಧಿಗಳ ಸಂರಕ್ಷಣೆಗೆ ಆಯುಷ್ ಇಲಾಖೆ ಸಹಯೋಗದಲ್ಲಿ ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಘಟಕ ಸ್ಥಾಪನೆಗೆ 2 ಕೋಟಿ ರೂ. ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಶಿವಮೊಗ್ಗ ಸೇರಿ ಏಳು ಜಿಲ್ಲೆಯಲ್ಲಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರಗಳಲ್ಲಿ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಗೆ 353 ಕೋಟಿ ರೂ. ಯುವಕರಿಗೆ ಕೌಶಲ್ಯ ತರಬೇತಿ ನೀಡಿ, ಉದ್ಯೋಗವಕಾಶ ಹೆಚ್ಚಳಕ್ಕೆ ನಿರ್ಧಾರ. ಐದು ವರ್ಷಗಳಲ್ಲಿ 12,600 ವಿದ್ಯಾರ್ಥಿಗಳಿಗೆ ಉದ್ಯೋಗ ನಿಯುಕ್ತಿ. ಪ್ರವಾಸೋದ್ಯಮದಡಿ ಜೋಗ ಜಲಪಾತ ಅಭಿವೃದ್ದಿಗೆ 500 ಕೋಟಿ ರೂ. ಹಾಗೂ ಇತರೆ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಿ, ಟೂರಿಸಂ ಸರ್ಕ್ಯೂಟ್ ಅಭಿವೃದ್ದಿಗೆ ಕ್ರಮ. ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿರುವ ಮಿನಿ ಮೃಗಾಲಯ ಉನ್ನತ್ತೀಕರಿಸಲು 5 ಕೋಟಿ ರೂ. ಅನುದಾನ. ಕೆ-ಸೇಪ್ ಅಡಿ ತೀರ್ಥಹಳ್ಳಿ ಸೇರಿದಂತೆ ರಾಜ್ಯದ 10 ಕಡೆ ಅಗ್ನಿಶಾಮಕ ಠಾಣೆಗಳ ಸ್ಥಾಪನೆಗೆ ಬಜೆಟ್​ನಲ್ಲಿ ಬಿಎಸ್​​ವೈ ಪ್ರಸ್ತಾಪಿಸಿದ್ದಾರೆ.

ABOUT THE AUTHOR

...view details