ಶಿವಮೊಗ್ಗ: ತೀರ್ಥಹಳ್ಳಿ ಪಟ್ಟಣದಲ್ಲಿ ರಾಮೇಶ್ವರ ದೇವರ ತೆಪ್ಪೋತ್ಸವ ಅದ್ಧೂರಿಯಾಗಿ ಜರುಗಿತು. ಎಳ್ಳ ಅಮಾವಾಸ್ಯೆ ಜಾತ್ರೆಯ ಕೊನೆಯ ದಿನವಾದ ನಿನ್ನೆ ತುಂಗಾ ನದಿಯಲ್ಲಿ ನಡೆದ ತೆಪ್ಪೋತ್ಸವ ಜನಾಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ನಾಡಿನ ವಿವಿಧ ಭಾಗಗಳಿಂದ ಜನ ಸಾಗರವೇ ಹರಿದು ಬಂದಿತ್ತು.
ತುಂಗಾ ನದಿಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ತೆಪ್ಪದಲ್ಲಿ ಉತ್ಸವ ಮೂರ್ತಿಯನ್ನು ಮೂರು ಸುತ್ತು ನದಿಯಲ್ಲಿ ಪ್ರದಕ್ಷಿಣೆ ಹಾಕಿಸಿ, ಪೂಜೆ ಸಲ್ಲಿಸಲಾಯಿತು. ಈ ವೇಳೆ ನದಿ ದಂಡೆ ಮೇಲಿಂದ ಸಿಡಿಸಿದ ಸಿಡಿಮದ್ದುಗಳು ವರ್ಣರಂಜಿತವಾಗಿ ಮುಗಿಲಿಗೆ ಅಪ್ಪಳಿಸಿದವು. ಇದನ್ನು ಮರಳು ದಿಬ್ಬದ ಮೇಲೆ ಕುಳಿತಿದ್ದ ಜನ ನೋಡಿ, ಕೇಕೆ ಹಾಕಿ ಸಂಭ್ರಮಿಸಿದರು.
ಜನಾಕರ್ಷಣೆಯಾದ ಪಟಾಕಿ: ಒಂದು ಕಡೆ ಶ್ರೀ ರಾಮೇಶ್ವರ ದೇವರ ತಪ್ಪೋತ್ಸವ ವಿಜೃಂಭಣೆಯಿಂದ ಜರುಗಿದರೆ ಇನ್ನೊಂದು ಕಡೆ ತೆಪ್ಪೋತ್ಸವದ ನಂತರ ನಡೆದ ಸಿಡಿಮದ್ದು ಸಿಡಿಸುವ ಕಾರ್ಯಕ್ರಮ ನೋಡುವುದೇ ಆಕರ್ಷಣೆ. ತಮಿಳುನಾಡಿನ ಶಿವಕಾಶಿಯ ಪರಿಣಿತರ ತಂಡದಿಂದ ಸಿಡಿಮದ್ದಿನ ಬಣ್ಣದ ಲೋಕವನ್ನೇ ಸೃಷ್ಟಿಸಲಾಯಿತು. ನದಿಯ ಇಕ್ಕೆಲಗಳಲ್ಲಿ ಸಾವಿರಾರು ಹಣತೆಗಳು ತೇಲಿದವು. ಮತ್ತೊಂದು ಕಡೆಯಿಂದ ಆಕಾಶ ದೀಪಗಳು ನದಿಯಿಂದ ಗಗನವನ್ನು ಚುಂಬಿಸುವಂತೆ ನೆರೆದವರ ಮನಸೆಳೆಯಿತು.
ಪ್ರಸಿದ್ಧ ಕುರುವಳ್ಳಿಯ ಕಮಾನು ಸೇತುವೆಯನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಸಿಡಿಮದ್ದು ಪ್ರದರ್ಶನವನ್ನು ನೋಡಲು ಆಗಮಿಸಿದ ಜನರಿಗೆ ತುಂಗಾ ನದಿ ದಡದಲ್ಲಿ ಕುಳಿತುಕೊಳ್ಳು ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ತುಂಗಾ ನದಿ ದಡದ ಮರಳು ಹಾಸಿನ ಮೇಲೆ ಸಹ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.