ಶಿವಮೊಗ್ಗ:ಇಂದು ರಾತ್ರಿ 11ಕ್ಕೆ ರೈಲಿನ ಮೂಲಕ ತವರು ಜಿಲ್ಲೆ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಲಿರುವ ಸಿಎಂ ಯಡಿಯೂರಪ್ಪ ನಾಳೆ ಬೆಳಗ್ಗೆ 5 ಗಂಟೆಗೆ ಶಿವಮೊಗ್ಗ ತಲುಪಲಿದ್ದಾರೆ. ಬೆಳಗ್ಗೆ 7.15 ಕ್ಕೆ ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿ ಗ್ರಾಮಕ್ಕೆ ಭೇಟಿ ನೀಡಿ ಮಳೆಹಾನಿ ವೀಕ್ಷಣೆ ನಡೆಸಲಿದ್ದಾರೆ.
ನಾಳೆ ತವರು ಜಿಲ್ಲೆಗೆ ಸಿಎಂ ಭೇಟಿ: ನೆರೆ ಹಾನಿ ಪ್ರದೇಶಗಳ ಪರಿಶೀಲನೆ - ಶಿವಮೊಗ್ಗಕ್ಕೆ ಬಿಎಸ್ವೈ
ಮೈತ್ರಿ ಸರ್ಕಾರದ ಪತನದ ಬಳಿಕ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಬಿಎಸ್ವೈ ಅಧಿಕಾರ ಸ್ವೀಕರಿಸಿ ಇದೇ ಮೊದಲ ಬಾರಿಗೆ ಅವರ ತವರು ಜಿಲ್ಲೆಯಾದ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯಾಗಿದ್ದು, ನೆರೆಹಾನಿಗ ಪ್ರದೇಶಗಳಿಗೆ ಭೇಟಿ ನೀಡಿ ಸಿಎಂ ಪರಿಶೀಲನೆ ನಡೆಸಲಿದ್ದಾರೆ.
ನಂತರ 8 ಗಂಟೆಗೆ ಶಿವಮೊಗ್ಗ ನಗರದ ಮಳೆಹಾನಿ ಪ್ರದೇಶಗಳ ವೀಕ್ಷಣೆ ನಡೆಸಲಿದ್ದು, 9.45 ಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ವಿವರ ಪಡೆದುಕೊಳ್ಳಲಿದ್ದಾರೆ. ನಂತರ 10.35 ಕ್ಕೆ ಶಿಕಾರಿಪುರಕ್ಕೆ ಭೇಟಿ ನೀಡಿ, 11 ಗಂಟೆಗೆ ಹುಚ್ಚರಾಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಲಿದ್ದಾರೆ. 11.30 ಕ್ಕೆ ತವರು ಕ್ಷೇತ್ರದಲ್ಲಿ ಭರ್ತಿಯಾಗಿರುವ ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಿದ್ದು, ಮಧ್ಯಾಹ್ನ 12 ಕ್ಕೆ ಶಿಕಾರಿಪುರ ತಾಲ್ಲೂಕಿನ ನೆರೆಹಾನಿ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡಲಿದ್ದಾರೆ.
ಮಧ್ಯಾಹ್ನ 1.50 ಕ್ಕೆ ಸೊರಬ ತಾಲೂಕಿಗೆ ಭೇಟಿ ನೀಡಿ ನೆರೆಪೀಡಿತ ಪ್ರದೇಶಗಳ ವೀಕ್ಷಣೆ ಮಾಡಲಿದ್ದಾರೆ, ಮಧ್ಯಾಹ್ನ 2.50 ಸಾಗರಕ್ಕೆ ತೆರಳಿ ಮಳೆಹಾನಿ ಪ್ರದೇಶಗಳ ವೀಕ್ಷಣೆ ಮಾಡಲಿರುವ ಸಿಎಂ ಸಂಜೆ 4.30 ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಹೊರಟು ಸಂಜೆ 5.30 ಕ್ಕೆ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.