ಶಿವಮೊಗ್ಗ: ಉಪ್ಪಿಗಿಂತ ರುಚಿ ಇಲ್ಲ, ತಾಯಿಗಿಂತ ದೇವರಿಲ್ಲ ಎಂಬ ಗಾದೆ ಮಾತು ಸಾರ್ವಕಾಲಿಕ ಸತ್ಯ. ವಯಸ್ಸಾದ ತಂದೆ ತಾಯಿ ಸೇವೆ ಹೊರೆಯೆಂದು ಭಾವಿಸುವ ಇಂದಿನ ಕಾಲದಲ್ಲಿ ಭದ್ರಾವತಿ ತಾಲೂಕು ಕೊಡ್ಲಿಗೆರೆಯ ನಿವಾಸಿ ಹಾಲೇಶಪ್ಪ ಎಂಬುವರು 50 ಲಕ್ಷ ರೂ. ಖರ್ಚು ಮಾಡಿ ತಮ್ಮ ಮೃತ ತಾಯಿ ಸಮಾಧಿ ನಿರ್ಮಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಹೌದು, ಹಾಲೇಶಪ್ಪ ಅವರ ತಾಯಿಯ ಹೆಸರು ಕಮಲ. ಆದ್ದರಿಂದ ಸಮಾಧಿಯ ಜಾಗಕ್ಕೆ ಕಮಲನಿಧಿ ಎಂದು ಹೆಸರಿಟ್ಟಿದ್ದಾರೆ. ಕಮಲ ಅವರಿಗೆ ಮೂರು ಜನ ಗಂಡು ಮಕ್ಕಳು. ಇದರಲ್ಲಿ ಹಾಲೇಶಪ್ಪ ಹಿರಿಯರು. ಕಡು ಬಡತನದಿಂದ ಬಂದಂತಹ ಹಾಲೇಶಪ್ಪ ಮೊದಲು ಕೊಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ನಂತರ ಕಷ್ಟಪಟ್ಟು ಕೆಲಸ ಮಾಡಿ ಈಗ ಗುತ್ತಿಗೆದಾರರಾಗಿ ಉತ್ತಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
ತಾಯಿ ಸಮಾಧಿ ನಿರ್ಮಿಸಿದ ಕೊಡ್ಲಿಗೆರೆಯ ನಿವಾಸಿ ಹಾಲೇಶಪ್ಪ ಕಮಲಮ್ಮ ಕಳೆದ ವರ್ಷ ಮರಣ ಹೊಂದಿದ್ದರು. ತಾಯಿಯ ನೆನಪಿಗಾಗಿ ಕಲ್ಪನಹಳ್ಳಿಯ ತಮ್ಮ ಜಮೀನಿನಲ್ಲಿ ಹಾಲೇಶಪ್ಪ ಸಮಾಧಿ ನಿರ್ಮಿಸಿದ್ದಾರೆ. ಇವರ ತಾಯಿಗೆ ಈ ಜಮೀನು ಅಂದ್ರೆ ತುಂಬ ಇಷ್ಟವಂತೆ. ಕಮಲಮ್ಮ ಯಾವಾಗಲೂ ಈ ಜಮೀನಿನಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದರು. ಇವರೇ ಈ ತೋಟವನ್ನು ನಿರ್ವಹಣೆ ಮಾಡುತ್ತಿದ್ದರು. ಇದರಿಂದ ಹಾಲೇಶಪ್ಪನವರು ತಮ್ಮ ಜಮೀನಿನಲ್ಲಿಯೇ ಸಮಾಧಿ ನಿರ್ಮಿಸಿದ್ದಾರೆ.
ಇದನ್ನೂ ಓದಿ:ಅಂತ್ಯಕ್ರಿಯೆ ನಡೆಸಲು ಹಣವಿಲ್ಲ, ಗುಂಡಿ ಅಗೆದು ತಾಯಿ ಅಂತಿಮ ಸಂಸ್ಕಾರ ನಡೆಸಿದ ಮಗಳು
ತಾಯಿ ನೆನಪಿಗಾಗಿ ಗಾರ್ಡನ್ ನಿರ್ಮಾಣ: ತಾಯಿ ಅಂದ್ರೆ ಹಾಲೇಶಪ್ಪಗೆ ಎಲ್ಲಿಲ್ಲದ ಅಕ್ಕರೆ. ಯಾಕಂದ್ರೆ, ತಾಯಿ ಮಗ ಒಟ್ಟಿಗೆ ಕೂಲಿಗೆ ಹೋಗುತ್ತಿದ್ರು. ಹಾಲೇಶಪ್ಪನನ್ನು ಕಂಡರೂ ಸಹ ತಾಯಿಗೆ ಅಷ್ಟೇ ಅಕ್ಕರೆ. ಪ್ರತಿ ದಿನ ತಾಯಿಯ ಜೊತೆಗೆ ಊಟ ಮಾಡುತ್ತಿದ್ದರು. ಕಮಲಮ್ಮ ಮಗನ ಎಲ್ಲಾ ಕೆಲಸಗಳಿಗೆ ಆಶೀರ್ವಾದ ಮಾಡುತ್ತಿದ್ದರು. ಭೂಮಿ ಖರೀದಿ ಮಾಡಿದ ಮೇಲೆ ಕಮಲಮ್ಮ ತಾವೇ ಮುಂದೆ ನಿಂತು ಅಡಕೆ ತೋಟ ಮಾಡಿದ್ದರು. ತೋಟಕ್ಕೆ ಪ್ರತಿ ದಿನ ಬೆಳಗ್ಗೆ ಬಂದು ಸಂಜೆಯ ತನಕ ಇಲ್ಲಿಯೇ ಇದ್ದು ನೋಡಿಕೊಳ್ಳುತ್ತಿದ್ದರು. ಕಮಲಮ್ಮ ತಮ್ಮ ತೋಟವನ್ನು ಸುಂದರವಾಗಿಟ್ಟುಕೊಳ್ಳಲು ವಿವಿಧ ಸಸಿಗಳನ್ನು ನೆಟ್ಟಿದ್ದರು.
ಸಮಾಧಿ ಪಕ್ಕದಲ್ಲಿ ಗಾರ್ಡನ್ ನಿರ್ಮಿಸಲಾಗಿದೆ. ನೀರು ಹರಿಯುವ ಕೃತಕ ಜರಿಯನ್ನ ನಿರ್ಮಾಣ ಮಾಡಲಾಗಿದೆ. ತಾಯಿ ಮಗನ ಪ್ರೀತಿಯ ಸಂಕೇತವಾಗಿ ಹಸು ಹಾಗೂ ಕರುವಿನ ಪುತ್ಥಳಿಗಳನ್ನು ನಿರ್ಮಿಸಿದ್ದಾರೆ. ತಮ್ಮ ತೋಟಕ್ಕೆ 'ತಾಯಿಯ ನೆರಳು' ಎಂದು ಹೆಸರನ್ನಿಟ್ಟಿದ್ದಾರೆ. ಹಾಲೇಶಪ್ಪನವರ ಕಾರ್ಯಕ್ಕೆ ಅವರ ಮನೆಯವರು ಸಹ ಸಾಥ್ ನೀಡಿದ್ದು, ಎಲ್ಲಿಗೇ ಹೋದರು ಹಾಲೇಶಪ್ಪ ದಿನಕ್ಕೂಂದು ಭಾರಿ ತಾಯಿ ಸಮಾಧಿಗೆ ಬಂದು ಪೂಜೆ ಮಾಡುವುದನ್ನು ಮಾತ್ರ ಮರೆಯುವುದಿಲ್ಲ.
ಇದನ್ನೂ ಓದಿ:ಸಾವಿನಲ್ಲೂ ಸ್ವಾಭಿಮಾನ; 20 ವರ್ಷದ ಮುಂಚಿತವಾಗಿ ಸಮಾಧಿ ನಿರ್ಮಾಣ - ಇಂದು ಅಂತ್ಯ ಸಂಸ್ಕಾರ!
ತಾಯಿಗಾಗಿ ಆಸ್ಪತ್ರೆ ಸೇರಿದ ಮಗ: ಕೊರೊನಾ ಸಂದರ್ಭದಲ್ಲಿ ಕಮಲಮ್ಮನವರು ಆಸ್ಪತ್ರೆಗೆ ದಾಖಲಾಗಿದ್ದಾಗ, ಹಾಲೇಶಪ್ಪಗೆ ಕೋವಿಡ್ ಬಾರದೇ ಇದ್ದರೂ ತಾಯಿಯ ಜೊತೆ ಇರಬೇಕೆಂದು ಆಸ್ಪತ್ರೆಗೆ ದಾಖಲಾಗಿದ್ದರಂತೆ. ಜೊತೆಗೆ ಗ್ರಾನೈಟ್ನಲ್ಲಿ ಸಮಾಧಿ ಬಳಿ ಹಾಕಿರುವ ತಾಯಿಯ ಭಾವಚಿತ್ರವನ್ನು ರಾಜಾಸ್ಥಾನಕ್ಕೆ ಹೋಗಿ ಆರ್ಡರ್ ಕೊಟ್ಟು ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ, ತಾಯಿ ಮಗನ ಪ್ರೀತಿಯನ್ನು ಕಂಡು ಗ್ರಾಮಸ್ಥರು ಹಾಗೂ ಸ್ನೇಹಿತರು ಬೆರಗಾಗಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ:ಅಪ್ಪನ ಸಮಾಧಿ ಮುಂದೆ ರಾಷ್ಟ್ರಗೀತೆ ನುಡಿಸಿ ಸ್ವಾತಂತ್ರ್ಯ ದಿನ ಆಚರಿಸಿದ ಸೈನಿಕನ ಪುತ್ರಿ