ಶಿವಮೊಗ್ಗ : ಮುಖ್ಯಮಂತ್ರಿ ಸಿದ್ದರಾಮಯ್ಯನವರು 14 ನೇ ಬಾರಿ ಬಜೆಟ್ ಮಂಡನೆ ಮಾಡಿ ದಾಖಲೆ ಬರೆದಿದ್ದಾರೆ. ಆದರೆ, ನಿನ್ನೆ ಮಂಡಿಸಿರುವ ರಾಜ್ಯ ಬಜೆಟ್ ಶಿವಮೊಗ್ಗ ಜಿಲ್ಲೆಗೆ ನಿರಾಸೆ ಮೂಡಿಸಿದೆ. ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡದಿರುವುದು ಜಿಲ್ಲೆಯ ಜನರಿಗೆ ಬೇಸರ ಉಂಟುಮಾಡಿದೆ ಎಂದು ಉದ್ಯಮಿಯೊಬ್ಬರು ಹೇಳಿದ್ದಾರೆ.
ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಉದ್ಯಮಿ ವಿಶ್ವಾಸ್ ಕಾಮತ್, "ಸಿಎಂ ಸಿದ್ದರಾಮಯ್ಯನವರು ತಮ್ಮ ಬಜೆಟ್ನಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ರಾಜ್ಯದ ಎಲ್ಲಾ ವರ್ಗದವರನ್ನು ಟಾರ್ಗೆಟ್ ಮಾಡಿ ಬಜೆಟ್ ಮಂಡನೆ ಮಾಡಿದ್ದಾರೆ. ಇದನ್ನು ಹೊರತುಪಡಿಸಿದರೆ, ಜಿಲ್ಲೆಗೆ ಹೊಸದಾದ ಯಾವುದೇ ಯೋಜನೆಗಳನ್ನು ಘೋಷಿಸಿಲ್ಲ" ಎಂದರು.
ಇದನ್ನೂ ಓದಿ :ಸಿದ್ದರಾಮಯ್ಯ ಬಜೆಟ್ನಲ್ಲಿ ಬಳ್ಳಾರಿ ಜಿಲ್ಲೆಗೆ ಅನ್ಯಾಯವಾಗಿದೆ: ಯಶವಂತರಾಜ್ ನಾಗಿರೆಡ್ಡಿ
"ಬಜೆಟ್ ಮೇಲೆ ರಾಜ್ಯದ ಜನತೆ ಸಾಕಷ್ಟು ನಿರೀಕ್ಷೆಯನ್ನು ಹೊಂದಿದ್ದರು. ಮೂಲಭೂತವಾಗಿ, ಶಿಕ್ಷಣ, ಕೃಷಿಗೆ ಸಂಬಂಧಿಸಿದಂತೆ ಅನುಕೂಲಕರ ಬಜೆಟ್ ಇದಾಗಿಲ್ಲ. ಅಲ್ಲದೇ, ಗ್ಯಾರಂಟಿ ಯೋಜನೆ ಜಾರಿಗೆ 52,000 ಕೋಟಿ ರೂ. ಕ್ರೋಢೀಕರಿಸಲು ಈ ಬಜೆಟ್ ಮಂಡನೆ ಮಾಡಿದಂತೆ ಇದೆ. ಬಜೆಟ್ ಹೊಂದಾಣಿಕೆ ಮಾಡಲು ತೆರಿಗೆ ಹೆಚ್ಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಗ್ಯಾರಂಟಿಗಾಗಿ ತೆರಿಗೆ ಹೆಚ್ಚಳ ಮಾಡುವ ಎಲ್ಲಾ ಲಕ್ಷಣಗಳಿವೆ. ಇದು ಓಲೈಕೆಯ ಬಜೆಟ್ ಆಗಿ ಕಾಣಿಸುತ್ತಿದೆ. ಆತಂಕಕಾರಿ ಬಜೆಟ್ ಎನ್ನಬಹುದು ಎನ್ನುತ್ತಾರೆ " ಉದ್ಯಮಿ ವಿಶ್ವಾಸ್ ಕಾಮತ್.