ಕರ್ನಾಟಕ

karnataka

ETV Bharat / state

ಸಕ್ರೆಬೈಲು ಆನೆ ಭಾನುಮತಿ ಬಾಲ ಕಟ್ ಪ್ರಕರಣ : ಇಬ್ಬರು ಕಾವಾಡಿಗಳು ಅಮಾನತು - ಭಾನುಮತಿ ಆನೆ

ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದ ಭಾನುಮತಿ ಆನೆಯ ಬಾಲ ಭಾಗಶಃ ತುಂಡಾಗಿರುವ ಪ್ರಕರಣ ಸಂಬಂಧ ಇಬ್ಬರು ಕಾವಾಡಿಗರನ್ನು ಅಮಾನತು ಮಾಡಲಾಗಿದೆ.

sakrebail-elephant-tail-cut-case-two-kavadis-suspended
ಸಕ್ರೆಬೈಲು ಆನೆ ಭಾನುಮತಿ ಬಾಲ ಕಟ್ ಪ್ರಕರಣ : ಇಬ್ಬರು ಕಾವಾಡಿಗಳು ಅಮಾನತು

By ETV Bharat Karnataka Team

Published : Nov 13, 2023, 10:16 AM IST

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ ಭಾನುಮತಿ ಆನೆಯ ಬಾಲ ಕಟ್​ ​ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುಮತಿ‌ ಆನೆಯ ಸೀನಿಯರ್ ಹಾಗೂ ಜೂನಿಯರ್ ಕಾವಾಡಿಗರನ್ನು ಅಮಾನತು ಮಾಡಲಾಗಿದೆ. ಸುದೀಪ್ ಹಾಗೂ ಮೊಹಮ್ಮದ್ ಅವರನ್ನು ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಎಫ್‌ಓ ಪ್ರಸನ್ನ ಪಟಗಾರ್ ಅಮಾನತು ಮಾಡಿದ್ದಾರೆ.

ಅಕ್ಟೋಬರ್ 17ರಂದು ಭಾನುಮತಿ ಆನೆಯ ಬಾಲ ಭಾಗಶಃ ತುಂಡಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಗರ್ಭ ಧರಿಸಿದ್ದ ಭಾನುಮತಿ ಆನೆ ನವೆಂಬರ್ 4 ರಂದು ಹೆಣ್ಣು ಮರಿಗೆ ಜನ್ಮ ನೀಡಿತ್ತು. ಆನೆ ಬಾಲ ಭಾಗಶಃ ತುಂಡಾಗಿರುವ ಬಗ್ಗೆ ತಿಳಿದ ಡಿಸಿಎಫ್ ಪ್ರಸನ್ನ ಪಟಗಾರ್ ಅವರು ಸಕ್ರೆಬೈಲು ಎಸಿಎಫ್ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ‌ ಮಾಡಿ ವರದಿ ನೀಡುವಂತೆ ಸೂಚಿಸಿತ್ತು.

ಈ ಸಮಿತಿಯು ಡಿಸಿಎಫ್ ಅವರಿಗೆ ವರದಿ ನೀಡಿದ್ದು, ವರದಿಯಲ್ಲಿ ಆನೆ ಬಾಲ ಭಾಗಶಃ ತುಂಡಾಗಲು ಹರಿತವಾದ ಆಯುಧ ಬಳಕೆ ಮಾಡಲಾಗಿದೆ. ಆನೆಯನ್ನು ನೋಡಿಕೊಳ್ಳುವ ಮಾವುತ ಹಾಗೂ ಕಾವಾಡಿಗರು ಇದರ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ‌. ಆನೆಯು ಗರ್ಭಿಣಿಯಾಗಿದ್ದ ಕಾರಣ ಅದು ಬಿಡಾರದಲ್ಲಿಯೇ ಇತ್ತು. ಈ ವೇಳೆ ನಡೆದ ಘಟನೆ ಎಂದು ಹೇಳಲಾಗಿತ್ತು. ಈ ವರದಿಯನ್ನು ಪರಿಶೀಲಿಸಿದ ಡಿಎಪ್‌ಓ ಪ್ರಸನ್ನ ಪಟಗಾರ್ ಅವರು ಆನೆಯ ಕಾವಾಡಿಗಳಿಬ್ಬರನ್ನು ಅಮಾನತು ಮಾಡಿದ್ದಾರೆ.

ಈ ಬಗ್ಗೆ ಈಟಿವಿ ಭಾರತ್​ಗೆ ಪ್ರತಿಕ್ರಿಯಿಸಿದ ಡಿಎಫ್​ಓ ಪ್ರಸನ್ನ ಪಟಗಾರ್ ಅವರು, ಆನೆಯನ್ನು ಸರಿ ದಾರಿಗೆ ತರಲು ಹಾಗೂ ತಮ್ಮ ಮಾತನ್ನು ಕೇಳುವಂತೆ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಹರಿತವಾದ ಆಯುಧ ಆನೆ ಬಾಲಕ್ಕೆ ತಾಗಿ‌ ಭಾಗಶಃ ತುಂಡಾಗಿರಬಹುದು. ಈ ಸಂಬಂಧ ಆನೆಯ ಉಸ್ತುವಾರಿಗಳನ್ನು‌ ಅಮಾನತು ಮಾಡಲಾಗಿದೆ. ಇಬ್ಬರ ವಿಚಾರಣೆಗೆ ಒಂದು ತನಿಖಾ ತಂಡ ರಚನೆ ಮಾಡಲಾಗಿದೆ. ವಿಚಾರಣೆ ಮುಗಿಯುವ ತನಕ ಇಬ್ಬರು ಅಮಾನತ್ತಿನಲ್ಲಿರಲಿದ್ದಾರೆ. ಈ ವಿಚಾರಣೆ ಮೂರು ತಿಂಗಳಲ್ಲಿ ಮುಗಿಯಲಿದೆ. ಅಲ್ಲಿಯವರೆಗೂ ಭಾನುಮತಿ ಆನೆ ಬೇರೆಯವರ ಉಸ್ತುವಾರಿಯಲ್ಲಿರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಚಾಮರಾಜನಗರ ಕಾದಾಟದಲ್ಲಿ ಆನೆ ಸಾವು : ಕಳೆದ ಅಕ್ಟೋಬರ್ ತಿಂಗಳಲ್ಲಿ 35 ವರ್ಷದ ಗಂಡು ಕಾಡಾನೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಪತ್ತೆಯಾಗಿತ್ತು. ಇಲ್ಲಿನ ಗುಂಡ್ಲುಪೇಟೆ ತಾಲೂಕಿನ ಓಂಕಾರ ವನ್ಯಜೀವಿ ವಲಯ ವ್ಯಾಪ್ತಿಯ ಕುರುಬರಹುಂಡಿ ಬಳಿಯ ಆಲದ ಮರದ ಹಳ್ಳ ಅರಣ್ಯ ಪ್ರದೇಶದಲ್ಲಿ ಕಳೇಬರ ಕಂಡುಬಂದಿತ್ತು. ಕಾಡಾನೆಯು ಮತ್ತೊಂದು ಕಾಡಾನೆಯ ಜೊತೆ ಕಾದಾಟ ನಡೆಸಿ ಮೃತಪಟ್ಟಿರುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ :ಸಕ್ರೆಬೈಲು ಗರ್ಭಿಣಿ ಆನೆಯ ಬಾಲ ಬಹುತೇಕ ಕಟ್​: ಕಿಡಿಗೇಡಿಗಳ ಕೃತ್ಯ ಶಂಕೆ, ತನಿಖೆಗೆ ಸಮಿತಿ ರಚನೆ

ABOUT THE AUTHOR

...view details