ಶಿವಮೊಗ್ಗ : "ಪಿಎಸ್ಐ ನೇಮಕಾತಿ ಪ್ರಕರಣದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸಿದರು. ಸಾಗರ ತಾಲೂಕಿನ ಆನಂದಪುರಂ ಪೊಲೀಸ್ ಠಾಣೆ ಹಾಗೂ ವಸತಿ ಗೃಹಗಳಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, "ನಾನು ಗೃಹ ಇಲಾಖೆ ವಹಿಸಿಕೊಂಡ 20 ದಿನದಲ್ಲೇ ಪಿಎಸ್ಐ ಪರೀಕ್ಷೆ ಮುಗಿದು ಹೋಗಿತ್ತು" ಎಂದರು.
"ಪರೀಕ್ಷೆ ಹೇಗಾಯಿತು ಅಂತ ನಾನು ಅಧಿಕಾರಿಗಳನ್ನು ಕೇಳುತ್ತಿದ್ದೆ. ಅವರು ನನ್ನನ್ನು ನಂಬಿಸಿದರು. ಪರೀಕ್ಷೆ ಚೆನ್ನಾಗಿ ಆಗಿದೆ, ಬೇರೆ ಬೇರೆ ರಾಜ್ಯದವರು ಬಂದು ನೋಡಿಕೊಂಡು ಹೋಗಿದ್ದಾರೆ ಎನ್ನುತ್ತಿದ್ದರು. ಆದರೆ ಇಲ್ಲಿ ಬೇಲಿಯೇ ಎದ್ದು ಹೊಲ ಮೇಯಿತು. ಒಬ್ಬ ಐಪಿಎಸ್ ಎಡಿಜಿಪಿ ಅಧಿಕಾರಿ ಉತ್ತರ ಪತ್ರಿಕೆಯನ್ನೇ ತಿದ್ದುತ್ತಾನೆಂದರೆ ಏನ್ ಹೇಳೋದು?, ಇವತ್ತು ಆ ಅಧಿಕಾರಿ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾನೆ" ಎಂದರು.
ಹಗರಣದಲ್ಲಿ ಯಾರನ್ನೂ ಬಿಟ್ಟಿಲ್ಲ: "ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಅಧಿಕಾರಿಗಳನ್ನು ನಾವು ದೇವರಂತೆ ನೋಡುತ್ತೇವೆ. ಇವರಿಗೆ ಅಪರಿಮಿತ ಅಧಿಕಾರವನ್ನು ಈ ದೇಶದಲ್ಲಿ ಕೊಟ್ಟಿರುತ್ತೇವೆ. ಎಂಎಲ್ಎ ಬಳಿ ಇಲ್ಲದ ಅಧಿಕಾರ ಅವರ ಬಳಿ ಇದೆ. ಇಂತಹ ವ್ಯಕ್ತಿಗಳೇ ತಪ್ಪು ಮಾಡಿದರೆ ದೇಶ ಕಾಯುವವರು ಯಾರು? ಎಂದರು. ನಮಗೆ ಸಾಕ್ಷ್ಯಾಧಾರಗಳು ಸಿಕ್ಕ ತಕ್ಷಣ ತನಿಖಾ ಟೀಂ ಮಾಡಿ ಬಿಟ್ಟಿದ್ದೇವೆ. ಈಗಾಗಲೇ 108 ಜನರನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡಿದ್ದೇವೆ. ಪ್ರಕರಣದಲ್ಲಿ ಯಾರನ್ನೂ ಬಿಡಲಿಲ್ಲ. ನಮಗೆ ಆ ಸೂತಕವಿಲ್ಲ" ಎಂದು ಹೇಳಿದರು.
"ನನಗೆ ನಮ್ಮ ರಕ್ತಸಂಬಂಧಿಗಳು ಬಂದು, ನೀವು ಹೋಂ ಮಿನಿಸ್ಟರ್ ಆಗಿದ್ದೀರಿ, ನಮ್ಮ ಮಗನನ್ನು ಪಿಎಸ್ಐ ಮಾಡಿ ಎಂದು ಕೇಳಿಕೊಂಡಿದ್ದರು. ನಾನು ತಲೆತಗ್ಗಿಸುವಂತೆ ಆಗುತ್ತದೆ ಎಂದು ಹೇಳಿದೆ. ಅದಕ್ಕೆ ಅವರು ಗೊಣಗಿಕೊಂಡು ವಾಪಸ್ ಹೋದರು" ಎಂದು ತಿಳಿಸಿದರು.
ಪೊಲೀಸರಿಗೆ ವಿಶೇಷ ಸೌಲಭ್ಯ: "ಹಿಂದಿನ ಸರ್ಕಾರಗಳು ಪೊಲೀಸ್ ಇಲಾಖೆಯನ್ನು ನಿರ್ಲಕ್ಷಿಸಿದ್ದವು. ನಮ್ಮ ಸರ್ಕಾರ ಪೊಲೀಸರಿಗೆ ಎರಡು ಬೆಡ್ ರೂಂನ ಮನೆ ನಿರ್ಮಾಣ ಮಾಡಿಕೊಡುತ್ತಿದೆ. ಪೊಲೀಸ್ ಠಾಣೆ ಹಾಗೂ ಅವರು ವಾಸಿಸುವ ಮನೆಗಳಿಗೆ ಆದ್ಯತೆ ನೀಡಿದ್ದೇವೆ. ಈ ವರ್ಷ ಇಲಾಖೆಯಿಂದ 107 ಪೊಲೀಸ್ ಠಾಣೆಯನ್ನು ನಿರ್ಮಾಣ ಮಾಡುತ್ತಿದ್ದೇವೆ. ಈ ಹಿಂದೆ ವರ್ಷಕ್ಕೆ ಐದು ಪೊಲೀಸ್ ಠಾಣೆಯನ್ನೂ ನಿರ್ಮಾಣ ಮಾಡುತ್ತಿರಲಿಲ್ಲ. ಪೊಲೀಸ್ ಠಾಣೆಗೆ ವಿಶೇಷ ಅನುದಾನವನ್ನು ಇಟ್ಟು ಇಷ್ಟು ಸಂಖ್ಯೆಯ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗುತ್ತಿದೆ" ಎಂದು ಮಾಹಿತಿ ನೀಡಿದರು.
ರಕ್ಷಾ ವಿಶ್ವವಿದ್ಯಾನಿಲಯ ನಿರ್ಮಾಣ: "ನಮ್ಮ ಜಿಲ್ಲೆಯಲ್ಲಿಯೇ ರಕ್ಷಾ ವಿಶ್ವವಿದ್ಯಾನಿಲಯವನ್ನು ನಿರ್ಮಾಣ ಮಾಡಲಾಗುತ್ತಿದೆ. ನಾನೇ ಗುಜರಾತ್ಗೆ ಹೋಗಿ ವಿವಿ ಮಂಜೂರು ಮಾಡಿಸಿಕೊಂಡು ಬಂದಿದ್ದೇವೆ. ಅದನ್ನು ಶಿವಮೊಗ್ಗದಲ್ಲಿ ನಿರ್ಮಾಣ ಮಾಡುತ್ತೇವೆ. ಪ್ರಸಕ್ತ ವರ್ಷದಿಂದಲೇ ಕಾರ್ಯಾರಂಭ ಮಾಡಲಿದ್ದು, ಪೊಲೀಸ್ ಇಲಾಖೆಗೆ ಬೇಕಾದ ಎಲ್ಲವನ್ನೂ ಇಲ್ಲಿ ಕಲಿಸಲಾಗುತ್ತದೆ. ಪಿಯುಸಿಯಾದ ಯುವಕರು ಅಲ್ಲಿ ಹೋಗಿ ವಿಶೇಷ ಕಲಿಕೆ ಮಾಡಬಹುದು" ಎಂದರು. ಸಾಗರ ಶಾಸಕ ಹಾಲಪ್ಪ ಹರತಾಳು ಸೇರಿದಂತೆ ಅನೇಕರು ಹಾಜರಿದ್ದರು.
ಇದನ್ನೂ ಓದಿ:ಮಾಡಾಳ್ ವಿರೂಪಾಕ್ಷಪ್ಪ ಕೇಸ್ನಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲ್ಲ: ಆರಗ ಜ್ಞಾನೇಂದ್ರ