ಶಿವಮೊಗ್ಗ :ಜಿಲ್ಲೆಯ ಸಾಗರ ತಾಲೂಕಿನ 'ಕಾಗೋಡು' ಗ್ರಾಮ ಅಂದ್ರೇ ಸಾಕು ನೆನಪಿಗೆ ಬರೋದೇ ಅಲ್ಲಿಯ ಹೋರಾಟ. 1950ರ ದಶಕದಲ್ಲಿ ಭೂಮಿಯ ಹಕ್ಕಿಗಾಗಿ ಕಾಗೋಡು ಗ್ರಾಮದಲ್ಲಿ ರಾಮ ಮನೋಹರ ಲೋಹಿಯಾ, ಶಾಂತವೇರಿ ಗೋಪಾಲಗೌಡ ಅವರ ನೇತೃತ್ವದಲ್ಲಿ ಹೋರಾಟ ನಡೆದಿತ್ತು. ಅದರ ಪರಿಣಾಮವಾಗಿ 1974ರಲ್ಲಿ ಮುಖ್ಯಮಂತ್ರಿ ಆಗಿದ್ದ ಡಿ.ದೇವರಾಜ ಅರಸು ಅವರು 'ಉಳುವವನೇ ಹೊಲದೊಡೆಯ' ಕಾಯ್ದೆ ಜಾರಿಗೆ ತಂದಿದ್ದರು.
ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಹೋರಾಟ ಈಗ ಅದೇ ಕಾಗೋಡು ಗ್ರಾಮದಲ್ಲಿ ಇಂದು ಪುನಃ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ಹೋರಾಟ ಆರಂಭಿಸಲಾಗಿದೆ. ಅಂದಿನ ಕಾಗೋಡು ಚಳವಳಿಗೆ ಸಾಕ್ಷಿಯಾಗಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಹೋರಾಟ ಪ್ರಾರಂಭಿಸಲಾಗಿದ್ದು,ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆ ತಿದ್ದುಪಡಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಲಾಗಿದೆ.
ಈ ಹೋರಾಟವನ್ನು ವಿಶಿಷ್ಟವಾಗಿ ರೂಪಿಸಲಾಗಿದ್ದು, ಕಾಗೋಡು ಗ್ರಾಮದ ಮಣ್ಣನ್ನು ಕೈಯಲ್ಲಿ ಹಿಡಿದು ಕಾಯ್ದೆಯ ವಿರುದ್ಧ ಪ್ರಮಾಣವಚನ ಸಹ ಸ್ವೀಕರಿಸಲಾಗಿದೆ. ಮಾತ್ರವಲ್ಲದೇ ಕಾಗೋಡು ಗ್ರಾಮದಿಂದ ಮಣ್ಣನ್ನು ಕೊಂಡೊಯ್ದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಗಾಂಧಿ ಪ್ರತಿಮೆ ಮುಂದಿಟ್ಟು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲು ಸಹ ಉದ್ದೇಶಿಸಲಾಗಿದೆ.
ಆ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಲಾಗಿದೆ. ಈ ಕಾಯ್ದೆಗಳ ತಿದ್ದುಪಡಿ ಕೈಬಿಟ್ಟು ರೈತರು ಹಾಗೂ ಕಾರ್ಮಿಕರ ಹಿತ ಕಾಪಾಡುವಂತೆ ಆಗ್ರಹಿಸಲಾಗಿದೆ. ಈ ಹಿಂದೆ ಭೂಮಿಯ ಹಕ್ಕಿಗಾಗಿ ಹೋರಾಡಿದ್ದ ಅದೇ ಐತಿಹಾಸಿಕ ಹೋರಾಟದ ನೆಲದಲ್ಲಿ ಇದೀಗ ಮತ್ತೆ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ರೈತ ಹಾಗೂ ಕಾರ್ಮಿಕ ಪರ ಚಳವಳಿಯೊಂದು ಆರಂಭ ಪಡೆದಿದೆ.