ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಘವೇಂದ್ರ ಶಿವಮೊಗ್ಗ : ಕಾಂಗ್ರೆಸ್‌ನವರು ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ವ್ಯಕ್ತಿಗಳನ್ನು ಇನ್ನೂ ಬಂಧಿಸಿಲ್ಲ. ಭದ್ರಾವತಿಯಲ್ಲಿ ಪೊಲೀಸರು ಸಹ ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲ್ಲೆಯಿಂದ ಗಾಯಗೊಂಡಿದ್ದ ಭದ್ರಾವತಿ ಬಿಜೆಪಿ ಕಾರ್ಯಕರ್ತ ಗೋಕುಲ ಕೃಷ್ಣ ಅವರನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಭದ್ರಾವತಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಹಲ್ಲೆಗೂ ಮೊದಲು ಅವರ ಮನೆ ಮುಂದೆ ಇದ್ದ ಕಾರನ್ನು ಜಖಂ ಮಾಡಿದ್ದಾರೆ. ಆದರೆ ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ" ಎಂದರು.
ಭದ್ರಾವತಿಗೆ ಕಳಂಕ ತರುವಂತಹ ಕೆಲಸವನ್ನು ಕಿಡಿಗೇಡಿಗಳು ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಮಟ್ಕಾ, ಜೂಜು ಇಸ್ಪೀಟು ದಂಧೆ ನಡೆಯುತ್ತಿದೆ. ಗೋಕುಲ್ ಕೃಷ್ಣ ವಿರುದ್ಧ ಸುಳ್ಳು ಅಟ್ರಾಸಿಟಿ ಕೇಸ್ ಹಾಕಿಸಿದ್ದಾರೆ. ಅಧಿಕಾರ ಶಾಶ್ವತವಲ್ಲ, ಈ ರೀತಿ ಗೂಂಡಾಗಿರಿ ಮಾಡೋದು ಸರಿಯಲ್ಲ ಎಂದರು.
ರಾಜಕಾರಣ ಮಾಡಲು ಕಾರ್ಯಕರ್ತರಿದ್ದಾರೆ. ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯಬಾರದು. ಪೊಲೀಸರು ತಾವು ಹಾಕಿಕೊಂಡಿರುವ ಖಾಕಿ ಬಟ್ಟೆಗೆ ಮರ್ಯಾದೆ ಕೊಟ್ಟು ಕೆಲಸ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಡುವ ಒಳ್ಳೆಯ ಕೆಲಸದ ಮೇಲೆ ಹಣೆಬರಹ ಬರೆಯಲಾಗುತ್ತದೆ. ಗೂಂಡಾಗಿರಿ ನಡೆಯುವುದಿಲ್ಲ. ಕೆಲ ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಇಂತಹ ಕೆಟ್ಟ ರಾಜಕಾರಣ ಯಾವಾಗಲೂ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ :ಪ್ರಧಾನಿ ಮೋದಿ, ಪುಲ್ವಾಮ ದಾಳಿ ಕುರಿತು ಕಾಂಗ್ರೆಸ್ ಶಾಸಕ ನೀಡಿದ ಹೇಳಿಕೆ ಖಂಡನಿಯ : ಬಿ. ವೈ ರಾಘವೇಂದ್ರ
ಸಂಸತ್ನಲ್ಲಿ ನಡೆದ ಘಟನೆ ಗಂಭೀರವಾಗಿದೆ. ಸಂಸತ್ತಿನಲ್ಲಿ ಆಗಿದ್ದು ಅತ್ಯಂತ ಗಂಭೀರ ವಿಚಾರವಾಗಿದೆ. 3-4 ವ್ಯಕ್ತಿಗಳು ಎರಡು ಮೂರು ತಿಂಗಳಿನಿಂದ ಮಾಕ್ ಟ್ರಯಲ್ ಮಾಡಿದ್ದಾರೆ. ಈ ರೀತಿ ಕೆಟ್ಟ ಕೆಲಸ ಮಾಡಲು ಏನು ಕಾರಣ? ಎಂದು ತನಿಖೆಯಿಂದ ತಿಳಿದು ಬರಲಿದೆ ಎಂದರು.
ಮೋದಿಯನ್ನು ರಾಹುಲ್ ಗಾಂಧಿ ಶನಿ ಎಂದು ಕರೆದಿದ್ದು ಖಂಡನೀಯ : ರಾಹುಲ್ ಗಾಂಧಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಶನಿ ಎಂದು ಕರೆದಿದ್ದರು. ಹಿಂದುಳಿದ ವರ್ಗದ ನಾಯಕನಿಗೆ ಥರ್ಡ್ ಕ್ಲಾಸ್ ಪದ ಉಪಯೋಗಿಸಿದ್ದಾರೆ. ಸುಳ್ಳು ಆರೋಪ ಮಾಡಿ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಹೇಳಿದರು.