ಹೆಚ್.ವಿಶ್ವನಾಥ್ ಗಂಭೀರ ಆರೋಪ ಶಿವಮೊಗ್ಗ: ಭದ್ರಾವತಿಯ ವಿಐಎಸ್ ಪಿ (ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ) ಕಾರ್ಖಾನೆಯನ್ನು ಜಿಂದಾಲ್ಗೆ ಪರಭಾರೆ ಮಾಡುವ ಕುರಿತು ಮಾತುಕತೆ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಶಿವಮೊಗ್ಗ ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ವಿಐಎಸ್ ಪಿ ಕಾರ್ಖಾನೆಯನ್ನು ಜಿಂದಾಲ್ಗೆ ನೀಡುವ ಮಾತುಕತೆ ನಡೆಯುತ್ತಿದೆ. ಜಿಂದಾಲ್ ಬಗ್ಗೆ ಇವರಿಗೆ ಸಾಕಷ್ಟು ಪ್ರೀತಿ ಇದೆ. ಯಡಿಯೂರಪ್ಪ ಅವರ ಪುತ್ರ ಚೆಕ್ ಮೂಲಕ ಹಣ ಪಡೆದು ಯಡಿಯೂರಪ್ಪ ಜೈಲು ಸೇರಿದ್ದರು. ನಿರಾಣಿಯವರು ಕೈಗಾರಿಕಾ ಕ್ರಾಂತಿ ಎಂದು ಹೇಳುತ್ತಿದ್ದರು. ಇದೇನಾ ಕೈಗಾರಿಕಾ ಕ್ರಾಂತಿ ಎಂದು ಕಿಡಿಕಾರಿದರು.
ಭದ್ರಾವತಿಯ ಕಾರ್ಖಾನೆ ಕನ್ನಡಿಗರ ಅಸ್ಮಿತೆ. ಅಂತಹ ಅಸ್ಮಿತೆಯನ್ನು ಪರಭಾರೆ ಮಾಡಲು ಹೊರಟಿದ್ದಾರೆ. ಇದರಿಂದ ಎಷ್ಟು ಜನರ ಮನೆ ಹಾಳಾಗುತ್ತಿದೆ. ಹಲವು ಮಹಿಳೆಯರು ಕಣ್ಣೀರಿಡುತ್ತಿದ್ದಾರೆ. ಜಿಮ್ (ಜಾಗತಿಕ ಹೂಡಿಕೆದಾರರ ಸಭೆ)ನಿಂದ 9 ಲಕ್ಷ ಕೋಟಿ ಬಂತು ಎಂದು ಹೇಳುತ್ತಿದ್ದಿರಿ. ಆದರೆ ಈ ಕಾರ್ಖಾನೆಗೆ 500 ಕೋಟಿ ರೂ. ಸಾಕಾಗಿತ್ತು. ನಮ್ಮ ಬಿಜೆಪಿ ಸರ್ಕಾರ ಕಾರ್ಖಾನೆಯನ್ನು ಸಂಪೂರ್ಣವಾಗಿ ಮಾರಾಟ ಮಾಡಲು ತಯಾರಾಗಿದೆ ಎಂದು ಆರೋಪಿಸಿದರು.
ನಾನು ಕಾರ್ಮಿಕರಿಗೆ ನೈತಿಕ ಬೆಂಬಲ ನೀಡಲು ಬಂದಿದ್ದೇನೆ ಮತ್ತು ಕಾರ್ಖಾನೆಯನ್ನು ಉಳಿಸಬೇಕಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯನವರ ಹೆಸರನ್ನು ಉಳಿಸಬೇಕಿದೆ. ನಮ್ಮ ರಾಜಕಾರಣಿಗಳು ಯಾರು ಕಾರ್ಖಾನೆ ಉಳಿಸುವ ಬಗ್ಗೆ ಮಾತನಾಡುತ್ತಿಲ್ಲ, ಸಂಸದರು, ನಾಲ್ಕು ಬಾರಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಮಾತನಾಡುತ್ತಿಲ್ಲ. ನಿಮ್ಮ ಕೈ ಕಟ್ ಮಾಡ್ತಿನಿ ಅಂತ ಹೇಳುವ ಈಶ್ವರಪ್ಪ ಅವರು ಸುಮ್ಮನಿದ್ದಾರೆ. ಕಾರ್ಖಾನೆ ಮಾರಿದ್ರೆ ಕೈ ಕಟ್ ಮಾಡ್ತಿನಿ ಅಂತ ಹೇಳುವ ತಾಕತ್ ನಿಮಗೆ ಇಲ್ಲವೆ ಎಂದು ಈಶ್ವರಪ್ಪನವರನ್ನು ಪ್ರಶ್ನಿಸಿದರು.
ಪ್ರಧಾನಿ ಮೋದಿ ಕಥೆ ಹೇಳದೆ, ಈ ಭಾಗದವರ ಕಥೆ ಕೇಳಬೇಕು : ಫೆ.27ರಂದು ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಾಣವಾದ ವಿಮಾನ ನಿಲ್ದಾಣವನ್ನು ಉದ್ಘಾಟಿಸಲು ಬರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇವಲ ತಮ್ಮ ಕಥೆಯನ್ನು ಹೇಳದೆ ಕಾರ್ಖಾನೆಯ ಜನರ ಕಥೆಯನ್ನು ಕೇಳಬೇಕು. ಕಾರ್ಖಾನೆ ಮುಚ್ಚುವುದು ಮತ್ತು ಮಾರುವುದೇ ನಿಮ್ಮ ಅಭಿವೃದ್ಧಿಯೇ ಎಂದು ಪ್ರಶ್ನಿಸಿದರು.
ಅಕ್ಷರ, ಆರೋಗ್ಯ, ಅನ್ನ ನೀಡುವುದು ಸರ್ಕಾರದ ಕರ್ತವ್ಯ. ಆದರೆ ಈ ಸರ್ಕಾರದಲ್ಲಿ ಈ ಮೂರು ಅಂಶಗಳು ಕಾಣುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ನಾನಾಗಲಿ ನನ್ನ ಮಗನಾಗಲಿ ಸ್ಪರ್ಧೆ ಮಾಡಲ್ಲ. ಯಾಕೆಂದರೆ ನಮ್ಮಹುಣಸೂರು ಕ್ಷೇತ್ರಕ್ಕೆ ಚುನಾವಣೆ ನಿಲ್ಲಲು ಕನಿಷ್ಠ 50 ಕೋಟಿ ರೂ. ಬೇಕು. ಅಷ್ಟೊಂದು ಹಣ ನಮ್ಮ ಬಳಿ ಇಲ್ಲವೆಂದು ಎಂದು ಹೇಳಿದರು. ಈ ವೇಳೆ ಟ್ರಸ್ಟ್ ಅಧ್ಯಕ್ಷರಾದ ಎನ್.ಮಂಜುನಾಥ್, ಗೋಪಾಲ ಯಡಿಗೇರೆ, ಸಂತೋಷ್ ಕಾಂಚಿನಕಟ್ಟೆ, ನಾಗರಾಜ್ ನೇರಿಗೆ ಸೇರಿ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ:ಮುಂದೆ ಕಮಲ, ಹಿಂದೆ ಹದ್ದು: ವಿಭಿನ್ನವಾಗಿ ನಿರ್ಮಾಣಗೊಂಡ ಶಿವಮೊಗ್ಗ ವಿಮಾನ ನಿಲ್ದಾಣದ ವಿಶೇಷತೆಗಳೇನು?