ಶಿವಮೊಗ್ಗ:ಜಿಲ್ಲೆಯ ಹೊಸನಗರ ತಾಲೂಕು ಹುಂಚ ಗ್ರಾಮದ ಸರ್ವೆ ನಂಬರ್ 69 ರಲ್ಲಿ ಕಲ್ಲು ಗಣಿಗಾರಿಕೆ ಮಾಡಲು ಅವಕಾಶ ನೀಡಿದ್ದು, ಜಿಲ್ಲಾಡಳಿತ ತಕ್ಷಣ ಗಣಿಗಾರಿಕೆಗೆ ನೀಡಿದ ಅನುಮತಿಯನ್ನು ವಾಪಸ್ ಪಡೆಯಬೇಕು ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಗೋಮಾಳ ಭೂಮಿಯಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ: ಗ್ರಾಮಸ್ಥರ ಆಕ್ರೋಶ - ಅಕ್ರಮ ಕಲ್ಲು ಗಣಿಗಾರಿಕೆ
ಮಲೆನಾಡು ಶಿವಮೊಗ್ಗದಲ್ಲಿ ಈಗಾಗಲೇ ಅಕ್ರಮ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಅಕ್ರಮ ಕಲ್ಲು ಗಣಿಗಾರಿಕೆಗೆ ಬ್ರೇಕ್ ಹಾಕಬೇಕದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಅರಣ್ಯ ಪ್ರದೇಶಕ್ಕೆ ಅಂಟಿಕೊಂಡಿರುವ ಗೋಮಾಳ ಭೂಮಿಯಲ್ಲಿ ಕಲ್ಲುಗಣಿಗಾರಿಕೆ ಮಾಡಲು ಅವಕಾಶ ನೀಡಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಹುಂಚ ಗ್ರಾಮದ ಲೋಕೇಶ್, ಚನ್ನಕೇಶವ ಹಾಗೂ ಶಂಕರಪ್ಪ ಹಾಗೂ ಕೃಷ್ಣಮೂರ್ತಿರವರಿಗೆ ತಲಾ 1 ಎಕರೆ ಭೂಮಿಯಲ್ಲಿ 20 ವರ್ಷದವರೆಗೆ ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಅನುಮತಿ ನೀಡಿದೆ. ಇದರಿಂದ ಕೇವಲ ಹುಂಚ ಗ್ರಾಮ ಮಾತ್ರವಲ್ಲದೆ, ಹೊಂಡಲಗದ್ದೆ, ನಾಗರಹಳ್ಳಿ, ಅಳಲೆಕೊಪ್ಪ, ಈರಿನಬೈಲು, ಮಳಿಕೊಪ್ಪ, ಕುಬಟಹಳ್ಳಿ ಗ್ರಾಮಗಳು ಗಣಿಗಾರಿಕಾ ಪ್ರದೇಶದಿಂದ ತೊಂದರೆಗೆ ಒಳಗಾಗಲಿವೆ. ಇವು ಸೂಕ್ಷ್ಮ ಪ್ರದೇಶಗಳಾಗಿದ್ದು, ಭೂಮಿ ಪಡೆದವರು ಗಣಿಗಾರಿಕೆ ನಡೆಸಲು ಮುಂದಾಗಿರುವುದನ್ನು ಖಂಡಿಸಿ ಐದಾರು ಗ್ರಾಮದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲಾಡಳಿತ ತಕ್ಷಣ ಗಣಿಗಾರಿಕೆಗೆ ನೀಡಿದ ಅನುಮತಿಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಜಿಲ್ಲಾಡಳಿತ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದರೆ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.