ಶಿವಮೊಗ್ಗ:ಅಂತರ್ಜಾತಿ ಪ್ರೇಮ ವಿವಾಹಕ್ಕೆ ಮನೆಯವರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ತನ್ನ ಪ್ರಿಯಕರನ ಜೊತೆ ವಿಷ ಸೇವಿಸಿ ಆತ್ನಹತ್ಯೆಗೆ ಯತ್ನಿಸಿದ ಘಟನೆ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿ ತಾಲೂಕಿನ ಯುವತಿ, ಹಾಲಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಯುವತಿ ಹಾಗೂ ಅರಣ್ಯ ಇಲಾಖೆಯಲ್ಲಿ ಫಾರೆಸ್ಟರ್ ಆಗಿರುವ ಪ್ರವೀಣ್ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಯುವತಿಯು ಸಾದು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಪ್ರವೀಣ ಬೆಳಗಾವಿ ಜಿಲ್ಲೆಯ ಸಂಕೇಶ್ವರದ ಮರಾಠಿ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಜಾತಿಯೇ ಇವರಿಬ್ಬರ ಪ್ರೀತಿಗೆ ಅಡ್ಡಿಯಾಗಿದೆ. ಇಬ್ಬರೂ ತಮ್ಮ ಪ್ರೀತಿಯನ್ನು ಮನೆಯಲ್ಲಿ ತಿಳಿಸಿದ್ದು, ಆದರೆ ಮದುವೆಗೆ ಆಕೆಯ ಮನೆಯಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ.
ಮನೆಯಲ್ಲಿ ತಮ್ಮ ಮದುವೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಿನ್ನೆ ಭದ್ರಾವತಿಯ ಎಪಿಎಂಸಿಯಲ್ಲಿ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಅವರನ್ನು ಭದ್ರಾವತಿಯ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಹಾವೇರಿಯಲ್ಲಿ ವಿಶೇಷಚೇತನ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ