ಶಿವಮೊಗ್ಗ: ಕಳೆದ ಎರಡು ವರ್ಷಗಳಿಂದ ಕೋವಿಡ್ ಹಾಗೂ ಅತಿಥಿಗಳ ದಿನಾಂಕ ನಿಗದಿಯಾಗದೆ ಮುಂದೂಡಲ್ಪಟ್ಟಿದ್ದ ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವ ಕೊನೆಗೂ ಜರುಗಿದೆ. ಶಂಕರಘಟ್ಟದಲ್ಲಿರುವ ವಿವಿಯ 31 ಹಾಗೂ 32ನೇ ಘಟಿಕೋತ್ಸವ ಏಕಕಾಲದಲ್ಲೇ ಇಂದು ನಡೆದಿದ್ದು, ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳು ಪದಕ ಪಡೆದು ಸಂಭ್ರಮಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಪಸ್ಥಿತಿಯಲ್ಲಿ ಬಸವ ಸಭಾಭವನದಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಪಿಹೆಚ್ಡಿ ಹಾಗೂ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ವಿಶ್ವವಿದ್ಯಾಲಯದ ಎರಡೂ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಯರೇ ಹೆಚ್ಚು ಚಿನ್ನದ ಪದಕ ಗೆದ್ದಿದ್ದಾರೆ.
31ನೇ ಘಟಿಕೋತ್ಸವದಲ್ಲಿ 71 ವಿದ್ಯಾರ್ಥಿಗಳು 127 ಸ್ವರ್ಣ ಪದಕ ಗಳಿಸಿದ್ದಾರೆ. ಈ ಪೈಕಿ 51 ವಿದ್ಯಾರ್ಥಿನಿಯರಿದ್ದರೆ, 20 ವಿದ್ಯಾರ್ಥಿಗಳಿದ್ದಾರೆ. 17 ನಗದು ಬಹುಮಾನಗಳನ್ನು 13 ವಿದ್ಯಾರ್ಥಿನಿಯರು ಪಡೆದುಕೊಂಡಿದ್ದಾರೆ. 32ನೇ ಘಟಿಕೋತ್ಸವದಲ್ಲಿ 66 ವಿದ್ಯಾರ್ಥಿಗಳು 132 ಸ್ವರ್ಣ ಪದಕ ಗಳಿಸಿದ್ದಾರೆ. ಈ ಪೈಕಿ 14 ವಿದ್ಯಾರ್ಥಿಗಳು, 52 ವಿದ್ಯಾರ್ಥಿನಿಯರಿದ್ದಾರೆ.
ಪ್ರಣೀತಾಗೆ 8 ಸ್ವರ್ಣ ಪದಕ:ಕನ್ನಡ ಎಂಎ ವಿಭಾಗದ ಪ್ರಣೀತಾ ಎಂ.ಟಿ ಅವರು 8 ಸ್ವರ್ಣ ಪದಕ ಮತ್ತು 2 ನಗದು ಬಹುಮಾನ ಪಡೆದರು. ಎಂಬಿಎ ವಿಭಾಗದ ಯತೀಶ್ ಕೆ.ಯು, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಎಂ.ಎಸ್ಸಿ ಜೈವಿಕ ತಂತ್ರಜ್ಞಾನ ವಿಭಾಗದ ಅನುಷಾ.ಎಸ್ ಹಾಗೂ ಎನ್ಇಎಸ್ ಇನ್ಸ್‌ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ಬಿಕಾಂ ವಿಭಾಗದ ನಿವ್ಯಾ ಕೆ. ನಾಯಕ್ ತಲಾ 5 ಸ್ವರ್ಣ ಪದಕ ಪಡೆದಿದ್ದಾರೆ.
ಕನ್ನಡ ವಿಭಾಗದ ದಿವ್ಯಾಗೆ 11 ಪದಕ:32ನೇ ಘಟಿಕೋತ್ಸವದಲ್ಲಿ ಎಂಎ ಕನ್ನಡ ವಿಭಾಗದ ದಿವ್ಯಾ ಹೆಚ್. ಎನ್ 11 ಚಿನ್ನದ ಪದಕ ಮತ್ತು 2 ನಗದು ಬಹುಮಾನ, ಎಂಬಿಎ ವಿಭಾಗದ ಪ್ರಿಯಾಂಕಾ.ಟಿ 6 ಸ್ವರ್ಣ ಪದಕ, ಎಂಎ ಸಮಾಜಶಾಸ್ತ್ರ ವಿಭಾಗದ ತನೂಷಾ, ಎಂಎಸ್ಸಿ ರಸಾಯನಶಾಸ್ತ್ರ ವಿಭಾಗದ ಸಂಯುಕ್ತಾ ಪೈ, ಎ.ಟಿ.ಎನ್. ಸಿ ಕಾಲೇಜು ಬಿ.ಕಾಂ ವಿದ್ಯಾರ್ಥಿನಿ ಮೇಘನಾ. ವಿ ಅವರು ತಲಾ 5 ಸ್ವರ್ಣ ಪದಕಗಳನ್ನು ಪಡೆದಿದ್ದಾರೆ.
ಸ್ವರ್ಣ ಪದಕ ವಿಜೇತ ವಿದ್ಯಾರ್ಥಿಗಳು ತಮ್ಮ ಸಾಧನೆಗೆ ಪೋಷಕರ ಬೆಂಬಲ ಹಾಗೂ ಅಧ್ಯಾಪಕರ ಮಾರ್ಗದರ್ಶನವೇ ಕಾರಣ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ವಿವಿಯ ಆವರಣದಲ್ಲಿ ಜರುಗಿದ 31ನೇ ಘಟಿಕೋತ್ಸವದಲ್ಲಿ 71 ವಿದ್ಯಾರ್ಥಿಗಳಿಗೆ 127 ಸ್ವರ್ಣ ಪದಕ ಸೇರಿದಂತೆ 91 ಜನರಿಗೆ ಪಿಹೆಚ್ಡಿ ಪದವಿ, 25,435 ವಿದ್ಯಾರ್ಥಿಗಳಿಗೆ ಪದವಿ ಹಾಗೂ 32ನೇ ಘಟಿಕೋತ್ಸವದಲ್ಲಿ 66 ವಿದ್ಯಾರ್ಥಿಗಳಿಗೆ 132 ಸ್ವರ್ಣ ಪದಕ ಸೇರಿದಂತೆ 129 ಜನರಿಗೆ ಪಿಹೆಚ್ಡಿ ಪದವಿ ಹಾಗೂ 20,638 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿದ್ದು, ಕುವೆಂಪು ವಿವಿಯ ಆವರಣ ಇಂದು ಹಬ್ಬದ ವಾತಾವರಣಕ್ಕೆ ಸಾಕ್ಷಿಯಾದಂತಾಗಿದೆ.
ಡಿ.ಹೆಚ್.ಶಂಕರಮೂರ್ತಿ ಸೇರಿ 6 ಗಣ್ಯರಿಗೆ ಗೌರವ ಡಾಕ್ಟರೇಟ್:31ನೇ ಘಟಿಕೋತ್ಸವದ ಭಾಗವಾಗಿ ಸಾರ್ವಜನಿಕ ಆಡಳಿತದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಸೇರಿ ಆರು ಮಂದಿಗೆ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.
ಶಿಕ್ಷಣತಜ್ಞೆ ಗೀತಾ ನಾರಾಯಣನ್ ಹಾಗೂ ಯೋಗ ಗುರು ಭ.ಮ.ಶ್ರೀಕಂಠ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಶಿಕ್ಷಣತಜ್ಞ, ವಿಶ್ರಾಂತ ಕುಲಪತಿ ಪ್ರೊ.ಟಿ.ವಿ. ಕಟ್ಟಿಮನಿ, ಅಂಧ ಕ್ರಿಕೆಟಿಗ ಮಹಾಂತೇಶ್ ಜಿ. ಕಿವಡಸಣ್ಣವರ್, ಯೋಗಗುರು ಬಾ. ಸು. ಅರವಿಂದ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಇದನ್ನೂ ಓದಿ:ಇಡಿ ವಿರುದ್ದ ಪ್ರಭಾವ ಬೀರುವಂತೆ ಕಾಂಗ್ರೆಸ್ ಪ್ರತಿಭಟನೆ ದುರಂತ: ಸಿಎಂ