ಶಿವಮೊಗ್ಗ: ಆರ್‌ಎಸ್‌ಎಸ್ ಒಂದು ದೇಶ ಭಕ್ತ ಸಂಘಟನೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪಕ್ಷದ ಹಿರಿಯ ನಾಯಕ ಅಡ್ವಾನಿ ಅಂತಹ ದೇಶ ಭಕ್ತರನ್ನು ನೀಡಿದೆ. ಸಿದ್ದರಾಮಯ್ಯ ಕಪಿಚೇಷ್ಟೆ ಮಾಡುವುದನ್ನು ಬಿಟ್ಟು ರಾಷ್ಟ್ರೀಯ ಸ್ವಯಂಸೇವಕ ಸಂಘಟನೆ ಏನು ಮಾಡಿದೆ ಎಂದು ತಿಳಿದುಕೊಳ್ಳಬೇಕು. ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದ್ರೆ ಪ್ರಚಾರ ಸಿಗಬಹುದು ಎಂದು ಪ್ರತಿಪಕ್ಷ ನಾಯಕರು ಹೀಗೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ಗುಡುಗಿದರು.
ಜನ ಈಗಾಗಲೇ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅನ್ನು ಧೂಳಿಪಟ ಮಾಡುತ್ತಿದ್ದಾರೆ. ಅದು ಗೊತ್ತಿದ್ದರೂ ಕೂಡ ರಾಷ್ಟ್ರ ಭಕ್ತ ಸಂಘಟನೆ ಬಗ್ಗೆ ಹೀಗೆ ಮಾತನಾಡುತ್ತಿದ್ದಾರೆ. ಇದರಿಂದ ಅವರು ಇನ್ನೂ ಧೂಳಿಪಟವಾಗುತ್ತಾರೆ. ಆರ್‌ಎಸ್‌ಎಸ್ ಹಿಂದೂಗಳನ್ನು ಸಂಘಟನೆ ಮಾಡುತ್ತಿರುವ ವಿಶೇಷ ಸಂಘಟನೆ. ಪ್ರಪಂಚದಲ್ಲಿ ಇಂತಹ ಯಾವುದೇ ಸಂಘಟನೆ ಇಲ್ಲ. ಭಯೋತ್ಪಾದಕ ಸಂಘಟನೆಗಳಿಗೆ ಸಪೋರ್ಟ್ ಮಾಡುತ್ತಿರುವುದು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ. ಪಿಎಫ್ಐ ಬ್ಯಾನ್ ಆಯ್ತು, ಅದು ಯಾಕೆ ಬ್ಯಾನ್ ಆಯ್ತು?, ರಾಷ್ಟ್ರದ್ರೋಹಿ ಕೆಲಸಗಳನ್ನು ಮಾಡ್ತಾ ಇದೆ ಎಂದು ಬ್ಯಾನ್ ಮಾಡಲಾಯಿತು. ಇಂತಹ ಸಂಘಟನೆಯನ್ನು ಬೆಳೆಸಿದವರು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಎಂದು ಆರೋಪಿಸಿದರು.
ಪಿಎಫ್ಐ ನಂತಹ ಸಂಘಟನೆಗಳನ್ನು ದಮನ ಮಾಡುವ ಶಕ್ತಿ ನೀಡಿರುವುದು ಆರ್‌ಎಸ್‌ಎಸ್ ಸಂಘಟನೆ. ರಾಜಕೀಯವಾಗಿ ಏನೂ ಬೇಕಾದರೂ ಪದ ಬಳಸಬಹುದು ಎಂದು ಸಿದ್ದರಾಮಯ್ಯ ಅಂದುಕೊಂಡಿರಬಹುದು. ಸಾರ್ವಕರ್ ಬಗ್ಗೆ ಹಗುರವಾಗಿ ಮಾತನಾಡಿದ್ರು, ಅವರಿಗೆ ಅಂಡಮಾನ್ ಜೈಲಿಗೆ ಹೋಗಲು ನಾನೇ ವಿಮಾನದ ಟಿಕೆಟ್ ಕೊಡಿಸುತ್ತೇನೆ. ಒಮ್ಮೆ ಅಲ್ಲಿನ ಜೈಲನ್ನು ಅವರು ನೋಡಿಕೊಂಡು ಬರಲಿ. ಆಗ ಸಾರ್ವಕರ್ ಯಾಕೆ ಜೈಲಿಗೆ ಹೋಗಿದ್ರು ಎಂಬುದು ತಿಳಿದು ಬರುತ್ತದೆ ಎಂದು ಈಶ್ವರಪ್ಪ ಟಾಂಗ್ ಕೊಟ್ಟರು.
ಇದನ್ನೂ ಓದಿ:ಸಿದ್ದರಾಮಯ್ಯ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಸೋಲುತ್ತಾರೆ: ಕೆ.ಎಸ್.ಈಶ್ವರಪ್ಪ