ಶಿವಮೊಗ್ಗದಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ : ಅದಷ್ಟು ಬೇಗ ಪಕ್ಷದ ರಾಜ್ಯಾಧ್ಯಕ್ಷರನ್ನು ಹಾಗೂ ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡಲಿ, ನಮ್ಮ ಕಾರ್ಯಕರ್ತರು ಕೇಳುತ್ತಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರು ಕೇಂದ್ರದ ನಾಯಕರಿಗೆ ಒತ್ತಾಯಿಸಿದ್ದಾರೆ.
ಶಿವಮೊಗ್ಗದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ರಾಜ್ಯದ ಬಿಜೆಪಿಯ ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ಚರ್ಚೆ ನಡೆಯುತ್ತಿದೆ. ನಮ್ಮ ಕಾರ್ಯಕರ್ತರು ಕೂಡ ಕೇಳುತ್ತಿದ್ದಾರೆ. ಕಾಂಗ್ರೆಸ್ನವರು ಇದೇ ವಿಚಾರದಲ್ಲಿ ನಮ್ಮನ್ನು ಟೀಕಿಸುತ್ತಿದ್ದಾರೆ. ಸದನದಲ್ಲಿ ಲೇವಡಿ ಮಾಡುತ್ತಿದ್ದಾರೆ. ಕೇಂದ್ರದ ಬಿಜೆಪಿ ನಾಯಕರು ಸಹ ರಾಜ್ಯದ ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ. ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ ಎಂದರು.
ನಮ್ಮ ತಪ್ಪೇನಾದರು ಇದ್ದರೆ ಕರೆದು ಬುದ್ಧಿ ಹೇಳಿ, ತಿದ್ದಿಕೊಳ್ಳುತ್ತೇವೆ. ನಮಗೆ ಗೊತ್ತಾಗದೆ ಯಾವುದಾದರೂ ತಪ್ಪಾಗಿರಬಹುದು. ಮೋದಿ ಮತ್ತೆ ಪ್ರಧಾನಿಯಾಗಬೇಕೆಂಬುದು ನಮ್ಮ ಆಸೆ. ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಂದಾಗಿ 28 ಸ್ಥಾನ ಗೆಲ್ಲಬೇಕಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ಘೋಷಿಸಲಿ. ಸಂಸತ್ ಚುನಾವಣೆ ಹತ್ತಿರ ಬರುತ್ತಿದೆ. ಕಟೀಲ್ ಅವರನ್ನೇ ಮುಂದುವರೆಸುವುದಾದರೆ ಮುಂದುವರಿಸಲಿ ನಮಗೇನು ಅಭ್ಯಂತರವಿಲ್ಲ ಎಂದರು.
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ : ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದು ಖಂಡನೀಯ. ಚೆನ್ನಾಗಿ ಒದೆ ತಿಂದ ಕಳ್ಳನಿಗೆ ಕೊನೆಗೆ ಬುದ್ಧಿ ಬಂದಂತೆ ಎಂಬಂತೆ ರಾಜ್ಯ ಸರ್ಕಾರ ಈಗ ಸುಪ್ರೀಂ ಕೋರ್ಟ್ಗೆ ಹೋಗುತ್ತಿದೆ ಎಂದು ಟೀಕಿಸಿದರು. ಕಾವೇರಿ ನೀರನ್ನು ಕಳ್ಳತನದಿಂದ ಬಿಡದೇ ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಕಳ್ಳತನದಿಂದ ನೀರು ಬಿಟ್ಟಿರುವುದೇ ದೊಡ್ಡ ತಪ್ಪು, ತಮಿಳುನಾಡಿನ ಸಿಎಂ ಸ್ಟಾಲಿನ್ ಅವರನ್ನು ಪರೋಕ್ಷವಾಗಿ ಒಪ್ಪಿಸಲು ಡಿ.ಕೆ.ಶಿವಕುಮಾರ್ ನೀರು ಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ರಾಜ್ಯದ ಜನರಿಗೆ ದ್ರೋಹ ಮಾಡಿದ್ದಾರೆ. ಈಗ ವಕೀಲರು, ತಜ್ಞರು ಹಾಗೂ ಹಲವರನ್ನು ಕರೆದು ಮಾತುಕತೆ ನಡೆಸಿದ್ದಾರೆ. ಮೊದಲು ಕಳ್ಳ ಎಂದೆ, ಈಗ ದಡ್ಡರು ಎನ್ನಬೇಕಾಗಿದೆ. ನಾವು ಜನರ ಜೊತೆ ಇದ್ದೇವೆ ಎಂದು ಈಗ ಹೇಳುತ್ತಿದ್ದಾರೆ. ಇದಕ್ಕಿಂತ ಅನ್ಯಾಯ ಮತ್ತೇನಿದೆ?. ರೈತರು, ವಕೀಲರು ಹಾಗೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿಂದೆ ಮುಖ್ಯಮಂತ್ರಿಗಳು ನೀರು ಬಿಟ್ಟಿದ್ದ ಉದಾಹರಣೆ ಇದೆ. ಇವರಿಬ್ಬರು ರಾಜ್ಯದ ಜನರ ಕ್ಷಮೆ ಕೋರಬೇಕು. ರಾಜ್ಯದ ಹಿತಾಸಕ್ತಿ ಕಾಪಾಡಬೇಕೆಂದರೆ ಎಲ್ಲರೂ ಒಟ್ಟಾಗಿರಬೇಕು. ಇಡೀ ಕರ್ನಾಟಕವನ್ನು ಒಟ್ಟಾಗಿ ಕರೆದು ಕಾನೂನು ತಜ್ಞರ ಬಳಿ ಚರ್ಚಿಸಬೇಕು. ಈಗಲಾದರೂ ತಜ್ಞರು, ಸರ್ವಪಕ್ಷಗಳನ್ನು, ವಕೀಲರನ್ನು ಕರೆಸಿ ತೀರ್ಮಾನಿಸಲಿ ಎಂದರು.
ಇನ್ನು ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿಯ ನಿಮಜ್ಜನ ಮೆರವಣಿಗೆ ಯಶಸ್ವಿಯಾಗಿದೆ. ಆದರೆ ಕೆಲ ಅಧಿಕಾರಿಗಳು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಅಧಿಕಾರಿಗಳು ಹಿಂದುತ್ವ ಮರೆಯುತ್ತಿದ್ದಾರೆ, ಇದು ಸರಿಯಲ್ಲ. ಮುಸ್ಲಿಂ ಗೂಂಡಾಗಳು ಕಾಂಗ್ರೆಸ್ ಸರ್ಕಾರ ತಮ್ಮ ಪರವಾಗಿದೆ ಎಂದು ಭಾವಿಸಿದರೆ ತಪ್ಪು. ಹರ್ಷನ ಹತ್ಯೆ ಘಟನೆಯನ್ನು ನೆನಪಿಟ್ಟುಕೊಳ್ಳಬೇಕು ಎಂದರು.
ಇದನ್ನೂ ಓದಿ :ಸೋನಿಯಾ, ಸ್ಟಾಲಿನ್ ಅವರನ್ನು ತೃಪ್ತಿಪಡಿಸಲು ಕದ್ದುಮುಚ್ಚಿ ಕಾವೇರಿ ನೀರು ಬಿಟ್ಟಿದ್ದಾರೆ: ಈಶ್ವರಪ್ಪ