ಶಿವಮೊಗ್ಗ:ಮುಂಗಾರು ಮಳೆ ಹೆಚ್ಚಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಮುಖ ಜಲಪಾತ, ಸಫಾರಿ ಮತ್ತು ಚಾರಣ ತಾಣಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿಕುದುರೆಮುಖದ ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ರಾಜ್ಯದ ಪ್ರಸಿದ್ಧ ಧಾರ್ಮಿಕ ಹಾಗೂ ಚಾರಣ ತಾಣವಾದ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯ ಗಡಿಭಾಗವಾದ ಕೊಡಚಾದ್ರಿ ಬೆಟ್ಟಕ್ಕೂ ಪ್ರವೇಶ ನಿಷೇಧಿಸಲಾಗಿದೆ.
ಮುಂಗಾರು ಮಳೆ ತೀವ್ರಗೊಂಡಿದ್ದು, ಜಲಪಾತಗಳ ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು ಬರುವ ಸಾಧ್ಯತೆ ಇದೆ. ಪ್ರವಾಸಿಗರು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕೊಡಚಾದ್ರಿ ಮತ್ತು ಇತರ ತಾಣಗಳ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಕೊಡಚಾದ್ರಿ ಬೆಟ್ಟದ ಜೊತೆಗೆ ಸ್ಥಳೀಯ ಜಲಪಾತಗಳಿಗೂ ಪ್ರವೇಶ ಸಹ ನಿಷೇಧವಿದೆ. ಕೊಡಚಾದ್ರಿಗೆ ನಿಷೇಧ ಹೇರಿರುವುದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಹಾಗೂ ಜೀಪ್ ಚಾಲಕರಿಗೆ ತೀವ್ರ ತೊಂದರೆ ಉಂಟಾಗಿದೆ.
ಈ ಜಲಪಾತಗಳ ವೀಕ್ಷಣೆಗೂ ನಿರ್ಬಂಧ: ಮುನ್ನೆಚ್ಚರಿಕಾ ಕ್ರಮವಾಗಿ ಈ ವಲಯದಲ್ಲಿರುವ ಅರಿಶಿನಗುಂಡಿ, ಕೂಡ್ಲು, ಬರ್ಕಳ, ಹಿಡ್ಲುಮನೆ, ವನಕಬ್ಬಿ, ಬಂಡಾಜೆ ಜಲಪಾತ್ರಗಳ ಪ್ರವೇಶಕ್ಕೂ ನಿರ್ಬಂಧ ವಿಧಿಸಲಾಗಿದೆ.
ಚಾರಣ ನಿಷೇಧವಿರುವ ಪ್ರದೇಶಗಳಿವು..: ಕುದುರೆಮುಖ ಪೀಕ್, ನೇತ್ರಾವತಿ ಪೀಕ್, ನರಸಿಂಹಗಡ-ಗಡಾಯಿಕಲ್ಲು, ವಾಲಿಕುಂಜ, ನರಸಿಂಹಪರ್ವತ, ಗಂಗಡಿಕಲ್ಲು, ಕುರಿಂಗಲ್ನಲ್ಲಿ ಚಾರಣಕ್ಕೂ ಸದ್ಯಕ್ಕೆ ಕಡಿವಾಣ ಹಾಕಲಾಗಿದೆ. ಕಟ್ಟಿನಹೊಳೆ ಮೂಲಕ ಕೊಡಚಾದ್ರಿಗೆ ತೆರಳುವ ವಾಹನ ವ್ಯವಸ್ಥೆ, ಕುದುರೆಮುಖ-ಸಿಂಗ್ಸಾರ್ ಸಫಾರಿ ಪ್ರದೇಶಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.