ಶಿವಮೊಗ್ಗ:ಚಿಲುಮೆ ಸಂಸ್ಥೆ ಮತದಾರರ ಪಟ್ಟಿಯಿಂದ ಲಕ್ಷಾಂತರ ಮತದಾರರನ್ನು ಕೈಬಿಡುವ ಮೂಲಕ ದೇಶದ್ರೋಹದ ಕೆಲಸ ಮಾಡಿದೆ. ಈ ರೀತಿ ಮೋಸ ಮಾಡಿದರೆ ಪ್ರಜಾಪ್ರಭುತ್ವಕ್ಕೆ ಯಾವುದೇ ಬೆಲೆ ಬರಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಕಾಂಗ್ರೆಸ್ನವರು ಬೊಮ್ಮಾಯಿ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ನಡೆಯುತ್ತಿತ್ತು ಎಂದು ಆರೋಪಿಸುತ್ತಿದ್ದಾರೆ. ಈ ರೀತಿ ಹೇಳಿಕೆಗಳು ನೀಡಿದರೆ ಸಾಮಾನ್ಯ ಜನರಿಗೆ ಇಬ್ಬರು ಕಳ್ಳರು ಅಂತ ಅನ್ನಿಸುತ್ತದೆ ಎಂದರು.
ಚಿಲುಮೆ ಸಂಸ್ಥೆ ದೇಶದ್ರೋಹದ ಕೆಲಸ ಮಾಡಿದೆ ಆದರೆ, ಚಿಲುಮೆ ಎಂಬ ಸಂಸ್ಥೆ ಮೋಸ ಮಾಡಿದೆ. ಇದನ್ನು ಪಕ್ಷಾತೀತವಾಗಿ ಖಂಡಿಸಬೇಕು. ಎಲ್ಲ ರಾಜಕೀಯ ಪಕ್ಷಗಳು ಕುಳಿತುಕೊಂಡು ಚರ್ಚೆ ನಡೆಸಿದರೆ ಎಲ್ಲವೂ ಸರಿಯಾಗುತ್ತದೆ. ಈ ರೀತಿ ಮೋಸ ಮಾಡುವುದಾದರೆ ಮತದಾನದ ಹಕ್ಕು ಯಾಕೆ ಬೇಕು ಎಂದು ಪ್ರಶ್ನಿಸಿದರು.
ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರು ಕೈಬಿಡುವುದು ನಿಜಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಸಿ ಬಳಿದ ಹಾಗೆ. ಪಕ್ಷಾತೀತವಾಗಿ ಚರ್ಚಿಸಿ ಈ ಪ್ರಕರಣಕ್ಕೆ ಅಂತಿಮ ಹಾಡಬೇಕು. ಈ ರೀತಿಯ ದೇಶದ್ರೋಹದ ಕೆಲಸಕ್ಕೆ ಬೆಂಬಲ ಕೊಡಬಾರದು ಎಂದು ಮನವಿ ಮಾಡಿದರು.
ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ರಾಷ್ಟ್ರದ್ರೋಹಿಗಳಿಗೆ ಕಾನೂನಿನ ಭಯ ಇಲ್ಲ. ಬಾಂಬ್ ಸ್ಫೋಟ ನಡೆಸುವುದು ಮಾಮೂಲಿಯಾಗಿದೆ. ತಂದೆ ತಾಯಿಗಳು ಮಕ್ಕಳಿಗೆ ಬುದ್ಧಿ ಹೇಳಬೇಕು. ಸಮಾಜ ಕೂಡ ಗಮನಹರಿಸಬೇಕು. ಈ ರೀತಿಯ ದೇಶದ್ರೋಹದ ಕೃತ್ಯಗಳಲ್ಲಿ ತೊಡಗಿಸಿಕೊಂಡವರನ್ನು ಗುಂಡಿಕ್ಕಿ ಕೊಲ್ಲಲ್ಲು ಅಧಿಕಾರಿಗಳಿಗೆ ಅಧಿಕಾರ ನೀಡಬೇಕು ಎಂದು ಹೇಳಿದರು.
ದೇಶದ್ರೋಹಿಗಳು ಶಾಂತಿಪ್ರಿಯ ಜಿಲ್ಲೆಯಲ್ಲಿ ಸ್ಫೋಟಕವನ್ನು ಟ್ರಯಲ್ ಮಾಡಿದರೆ ಯಾರಿಗೂ ಅನುಮಾನ ಬರಲ್ಲ ಎಂಬ ಕಾರಣಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಬಾಂಬ್ ಸ್ಪೋಟಕ ಸಿಡಿಸಿದ್ದಾರೆ. ಬಿಗಿ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್.. ಶಾರಿಕ್ನೊಂದಿಗೆ ಸಂಪರ್ಕದಲ್ಲಿದ್ದ ಮಹಮದ್ ರುಹುಲ್ಲಾ ವಶಕ್ಕೆ