ಶಿವಮೊಗ್ಗ:ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ ಯಾಕೆ ಉರುಳಿಸುವ ಕೆಲಸ ಮಾಡಬಾರದು ಎಂದು ಬಿಜೆಪಿಯ ಹಿರಿಯ ನಾಯಕ ಹಾಗು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಹೋದಾಗ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಯಾವ ಶಾಸಕರೂ ಕೂಡಾ ಅಲ್ಲಿರಲಿಲ್ಲ ಎಂದು ಟೀಕಿಸಿದರು. ಇದೇ ವೇಳೆ, ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಯಾವುದೇ ಹೊಸ ಅಭಿವೃದ್ಧಿ ಕಾಮಗಾರಿಯೂ ನಡೆಯುತ್ತಿಲ್ಲ. ಆಡಳಿತ ಪಕ್ಷದ ಶಾಸಕರುಗಳಿಗೆ ಸರ್ಕಾರ ಇರುವುದೇ ಬೇಡವಾಗಿದೆ. ರಾಜ್ಯದ ಜನರಿಗೂ ಸಹ ಸರ್ಕಾರ ಬೇಡವಾಗಿದೆ. ಇದರಿಂದಾಗಿ ಸರ್ಕಾರ ಬೀಳಿಸುವ ನಿಟ್ಟಿನಲ್ಲಿ ಬಿಜೆಪಿ ಯಾಕೆ ಪ್ರಯತ್ನಿಸಬಾರದು ಎಂದರು.
"ಇಂದಲ್ಲ ನಾಳೆ ಡಿಕೆಶಿ ಜೈಲಿಗೆ": ಡಿ.ಕೆ.ಶಿವಕುಮಾರ್ ಎಷ್ಟು ಅಕ್ರಮ ಆಸ್ತಿ ಹಾಗೂ ಹಣ ಸಂಗ್ರಹ ಮಾಡಿದ್ದರು ಎಂದು ತನಿಖೆಯಿಂದ ಹೊರಬಂದು, ಅವರು ಜೈಲಿಗೆ ಹೋಗಿ ಬಂದಿದ್ದಾರೆ. ಜೈಲಿಗೆ ಹೋಗಿ ಬಂದು ಈಗ ಬೇಲ್ನಲ್ಲಿದ್ದಾರೆ ಎಂದು ಹೇಳಿದರೆ ಅವರಿಗೆ ಸಿಟ್ಟು ಬರುತ್ತದೆ. ಡಿಕೆಶಿ ಇಂದಲ್ಲ ನಾಳೆ ಮತ್ತೆ ಜೈಲಿಗೆ ಹೋಗುತ್ತಾರೆ ಎಂದು ಹೇಳಿದರು.
ಐಟಿ ದಾಳಿ ವಿಚಾರ: ಐಟಿ ದಾಳಿಯಲ್ಲಿ ದೊರೆತ ಕೋಟಿಗಟ್ಟಲೆ ಹಣದ ವಿಚಾರವಾಗಿ ಪ್ರತಿಕ್ರಿಯಿಸಿ, ನೂರಾರು ಕೋಟಿ ರೂ. ಸಿಕ್ಕಿದೆ. ಅದನ್ನು ತನಿಖೆ ಮಾಡಿ ಎಂದರೆ ತನಿಖೆ ಮಾಡಲ್ಲ ಎನ್ನುತ್ತಾರೆ. ಡಿ.ಕೆ.ಶಿವಕುಮಾರ್ ಬಳಿ ಸೌಜನ್ಯದ ಮಾತಿಲ್ಲ. ಅವರ ಉತ್ತರದಲ್ಲೂ ಗೂಂಡಾಗಿರಿ ಇದೆ. ನಿಮ್ಮ ಮೇಲೆ ಬಂದಿರುವ ಆರೋಪವನ್ನು ಹೇಳಿದರೆ ಅದು ತಪ್ಪೇ ಎಂದು ಕೇಳಿದರು.