ಶಿವಮೊಗ್ಗ: ಸ್ಮಾರ್ಟ್ ಸಿಟಿ ಯೋಜನೆ ಭ್ರಷ್ಟಾಚಾರಕ್ಕೆ ಬುನಾದಿ ಹಾಕಿದ್ದು, ಇದರ ರೂವಾರಿ ಎನಿಸಿಕೊಂಡಿರುವ ಶಾಸಕ, ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಅವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಉಪಮುಖ್ಯಮಂತ್ರಿ, ಸಚಿವ, ಪರಿಷತ್ ಸದಸ್ಯರಾಗಿದ್ದ ಅವರು ನಗರಕ್ಕೆ ಕೊಟ್ಟಿರುವ ಕೊಡುಗೆಯಾದರೂ ಏನು? ಎಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಕೆ. ಬಿ. ಪ್ರಸನ್ನಕುಮಾರ್ ಪ್ರಶ್ನಿಸಿದರು.
ನಗರದಲ್ಲಿ ಬುಧವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆ ತುಂಬಾ ಆಶಯದೊಂದಿಗೆ ಜಾರಿಯಾಗಿತ್ತು. ಇದು ಜಾರಿಯಾಗುವಾಗ ನಾವು ಇಡೀ ಶಿವಮೊಗ್ಗ ನಗರದ ಎಲ್ಲಾ ವಾರ್ಡ್‌ಗಳಲ್ಲಿ ನಾಗರಿಕ ಸಮಿತಿಗಳನ್ನು ರಚಿಸಿ ಸಮಿತಿಗಳು ಕೊಟ್ಟ ಸಲಹೆಗಳನ್ನು ಪಡೆದು ಸ್ಮಾರ್ಟ್ ಸಿಟಿ ಯೋಜನೆ ಬರಮಾಡಿಕೊಂಡಿದ್ದೆವು. ಆದರೆ, ನಮ್ಮ ಆಶಯಗಳಿಗೆ ಇಂದು ಧಕ್ಕೆಯಾಗಿದ್ದು, ಸ್ಮಾರ್ಟ್ ಸಿಟಿ ಯೋಜನೆಯೇ ದಿಕ್ಕು ತಪ್ಪುತ್ತಿದೆ. ಭ್ರಷ್ಟಾಚಾರಕ್ಕೆ ನಾಂದಿಯಾಗಿದೆ. ಕಾಮಗಾರಿಗಳೆಲ್ಲ ಅವೈಜ್ಞಾನಿಕವಾಗಿವೆ. ಶಾಸಕರು ಜವಾಬ್ದಾರಿ ಮರೆತಿದ್ದಾರೆ. ಕಾಲ ಇನ್ನೂ ಮಿಂಚಿಲ್ಲ. ಅವರು ಮಾಡಿದ ತಪ್ಪುಗಳನ್ನು ಇನ್ನಾದರೂ ತಿದ್ದಿಕೊಳ್ಳಲಿ ಎಂದು ಹೇಳಿದರು.
ಬಿ. ಹೆಚ್ ರೋಡಿನ ಇಕ್ಕೆಲಗಳಲ್ಲಿ ಆಸ್ತಿ ಮಾಡಿದ್ದೇ ಈಶ್ವರಪ್ಪ ಅವರ ಸಾಧನೆ.. ತಮ್ಮ ರಾಜಕೀಯ ಜೀವನದಲ್ಲಿ ಇವರು ಮಾಡಿರುವ ಸಾಧನೆ ಏನಂದ್ರೆ ಬಿ.ಹೆಚ್ ರೋಡಿನ ಇಕ್ಕೆಲಗಳಲ್ಲಿ ಕಣ್ಣಿಗೆ ಕಾಣುವಂತೆ ಮಾಡಿರುವ ಆಸ್ತಿ. ಧರ್ಮದ ಹೆಸರಿನಲ್ಲಿ ರಾಜಕೀಯ. ಇವರು ಶಿವಮೊಗ್ಗ ನಗರವನ್ನು ಕುಖ್ಯಾತಿಗೊಳಿಸುವ ಮೂಲಕ ರಾಜ್ಯದಲ್ಲಿ ನಗರವನ್ನು ಅತೀ ಸೂಕ್ಷ್ಮ ಪ್ರದೇಶದ ಪಟ್ಟಿಯಲ್ಲಿ ಸೇರಿಸಿರುವುದೇ ಈಶ್ವರಪ್ಪರ ಸಾಧನೆಯಾಗಿದೆ ಎಂದು ಟೀಕಿಸಿದರು.