ಶಿವಮೊಗ್ಗ: ಜನತಾ ದರ್ಶನ ಕಾರ್ಯಕ್ರಮವು ಜನ ಸಾಮಾನ್ಯರ ಸಮಸ್ಯೆ ಅರಿತು ಆಡಳಿತದಲ್ಲಿ ಹಿಡಿತ ಹೊಂದಲು ಸಹಕಾರಿ ಆಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ನನಗೆ ಹೊಸದಲ್ಲ. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ, "ಅಧಿಕಾರಿಗಳೇ ನಿಮ್ಮಲ್ಲಿಗೆ" ಎಂಬ ಒಂದು ಕಾರ್ಯಕ್ರಮ ಮಾಡಿದ್ದರು. ನಾನು ಇದನ್ನು ಸೊರಬದಲ್ಲಿ ನಡೆಸಿದ್ದೆ. ಅಧಿಕಾರಿಗಳು ತಾಲೂಕು ಮಟ್ಟಕ್ಕೆ ಹೋಗಬೇಕೆಂದು ಈ ಕಾರ್ಯಕ್ರಮ ನಡೆಸಿದ್ದರು. ಇಂದಿನ ಜನತಾ ದರ್ಶನ ಅದರ ಮುಂದುವರೆದ ಭಾಗ ಎಂದು ಹೇಳಿದರು.
ಜಿಲ್ಲಾ ಮಟ್ಟದಲ್ಲಿ ಇಂತಹ ಕಾರ್ಯಕ್ರಮ ನಡೆಸಿದಾಗ ಜನರ ಸಮಸ್ಯೆಗಳನ್ನು ಅಲಿಸಲು ಸುಲಭವಾಗುತ್ತದೆ. ಇಲ್ಲಿ ಅಹವಾಲು ತೆಗೆದುಕೊಳ್ಳುವುದು ಅಷ್ಟೆ ಅಲ್ಲ, ಅಹವಾಲಿಗೆ ಕಾನೂನು ಬದ್ಧವಾಗಿ ಉತ್ತರ ನೀಡುವುದು ಮುಖ್ಯವಾಗುತ್ತದೆ. ಸಿಎಂ ಆದೇಶದಂತೆ ರಾಜ್ಯಾದ್ಯಂತ ಕಾರ್ಯಕ್ರಮ ನಡೆಸಲಾಗುತ್ತಿದೆ. ಮುಂದೆ ಶಾಸಕರುಗಳು ಕೂಡ ಈ ಕಾರ್ಯಕ್ರಮ ನಡೆಸಬಹುದು. ಅಧಿಕಾರಿಗಳು ಜನರಲ್ಲಿಗೆ ಹೋದಾಗ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆ. ಆಡಳಿತ ಹಿಡಿತ ಹಿಡಿತ ಸಾಧಿಸಲು ಸಹಕಾರಿಯಾಗುತ್ತದೆ. ಜನ ಸಾಮಾನ್ಯರಿಗೂ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿದೆ ಎಂದು ಅನ್ನಿಸಬೇಕು. ಇದು ಒಳ್ಳೆಯ ಕೆಲಸ. ಎಲ್ಲಾ ಕಡೆ ಇಂತಹ ಕಾರ್ಯಕ್ರಮ ಆಗಬೇಕಿದೆ ಎಂದರು.
ಆಡಳಿತದಲ್ಲಿ ಹಿಡಿತ ತರಲು ಇಂತಹ ಕಾರ್ಯಕ್ರಮ ಬೇಕು ಎಂದು ಸಿಎಂ ಅವರಿಗೆ ಅನ್ನಿಸಿರಬಹುದು. ಆದ್ದರಿಂದ ಇಂತಹ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. ಸಾಮಾನ್ಯ ಜನರು ನಮಗೆ ಮತ ಹಾಕಿದ್ದಾರೆ. ಜನರ ಜೊತೆಗೆ ನಾವು ಇದ್ದರೆ ಆಡಳಿತ ಸಹಜವಾಗಿಯೇ ಸರಿ ಆಗುತ್ತದೆ. ಜೊತೆಗೆ ಅಧಿಕಾರಿ ವರ್ಗದವರು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಸಮಸ್ಯೆಗಳನ್ನು ಇತ್ಯರ್ಥ ಮಾಡುವ ಒಂದು ವೇದಿಕೆ ಆಗಲಿದೆ ಎಂದು ಸಚಿವರು ತಿಳಿಸಿದರು.
ಕಾವೇರಿ ನದಿ ನೀರು ವಿವಾದ: ಬಂದ್ ಮಾಡುವುದು, ಪ್ರತಿಭಟನೆ ನಡೆಸುವುದು ಅವರವರ ಹಕ್ಕು. ಆದ್ರೆ ಸಾಮಾನ್ಯ ಜನರಿಗೆ ಹಾಗೂ ಆಸ್ತಿಗೆ ಹಾನಿಯನ್ನುಂಟು ಮಾಡದ ಹಾಗೆ ಪ್ರತಿಭಟನೆ ನಡೆಸಬೇಕಾಗುತ್ತದೆ. ಕರ್ನಾಟಕ ರಾಜ್ಯ ಬಹಳ ಸಂಕಷ್ಟದಲ್ಲಿದೆ. ಸುಪ್ರಿಂ ಕೋರ್ಟ್ ನೀವೇ ತೀರ್ಮಾನ ಮಾಡಿ ಎಂದು ಹೇಳುತ್ತದೆ. ಕಾವೇರಿ ನೀರು ಹಂಚಿಕೆ ಪ್ರಾಧಿಕಾರದವರು ಮನಸ್ಸಿಗೆ ಬಂದ ಹಾಗೆ ತೀರ್ಮಾನ ಮಾಡುತ್ತಾರೆ. ನಮ್ಮಲ್ಲಿನ ವಸ್ತು ಸ್ಥಿತಿಯನ್ನು ಅರಿತುಕೊಳ್ಳಬೇಕು ಎಂದು ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಬೇಕೆಂಬ ಪ್ರಾಧಿಕಾರದ ಆದೇಶವನ್ನು ಅವರು ಖಂಡಿಸಿದರು.