ಶಿವಮೊಗ್ಗ: ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆ ನಗರದ ಧಾರ್ಮಿಕ ಕೇಂದ್ರ ,ಶಿಕ್ಷಣ ಸಂಸ್ಥೆಗಳು ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಸಿ.ಸಿ ಕ್ಯಾಮರಾ ಅಳವಡಿಕೆ ಸೇರಿ ಸೂಕ್ತ ಭದ್ರತೆ ಕಲ್ಪಿಸಿಕೊಳ್ಳುವಂತೆ ಎಸ್ಪಿ ಡಾ.ಅಶ್ವಿನಿ ಸೂಚನೆ ನೀಡಿದ್ದಾರೆ.
ಜನನಿಬಿಡ ಪ್ರದೇಶದಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಸಿ: ಎಸ್ಪಿ ಡಾ.ಅಶ್ವಿನಿ
ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಹಿನ್ನೆಲೆ ರಾಜ್ಯದಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಜನ ಸಂದಣಿ ಹೆಚ್ಚಿರುವ ಕಡೆ ಸಿಸಿ ಟಿವಿಯನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಶಿವಮೊಗ್ಗ ಎಸ್ಪಿ ಸೂಚನೆ ನೀಡಿದ್ದಾರೆ.
ನಗರದಲ್ಲಿ ಸಭೆ ನಡೆಸಿದ ಅವರು ಶಾಪಿಂಗ್ ಕಾಂಪ್ಲೆಕ್ಸ್ಗಳು, ಮಾಲ್ಗಳ ಮಾಲೀಕರು, ವ್ಯಾಪಾರಸ್ಥರು ಕರ್ನಾಟಕ ಪಬ್ಲಿಕ್ ಕಾಯ್ದೆ ಅನ್ವಯ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು ಎಂದರು. ಪ್ರತಿದಿನವೂ ಸಿಸಿ ಕ್ಯಾಮರಾ ಕಾರ್ಯಪ್ರವೃತ್ತವಾಗಿ ಇರುವಂತೆ ನೋಡಿಕೊಳ್ಳುವುದಲ್ಲದೇ, ಜನನಿಬಿಡ ಪ್ರದೇಶಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.
ಬಹುತೇಕ ಕಡೆ ಸಿಸಿ ಕ್ಯಾಮರಾ ಇರುತ್ತವೆ. ಆದರೆ ಅವು ನಗದು ವ್ಯವಹಾರ ನಡೆಸುವ ಅಥವಾ ಕೆಲವೊಂದು ಸ್ಥಳಗಳಿಗೆ ಸೀಮಿತವಾಗಿರುತ್ತವೆ. ಕಟ್ಟಡದ ಹೊರ ಭಾಗದಲ್ಲಿ ನಡೆಯುವ ಚಟುವಟಿಕೆಗಳು ಸಂಗ್ರಹವಾಗಿರುವಂತಿರಬೇಕು. ದಾಖಲಾಗುವ ಮಾಹಿತಿಯನ್ನು ಅಳಿಸಬಾರದು. ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಇರಬೇಕು ಎಂದರು. ಶಾಲೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಆಟೋ ನಿಲ್ದಾಣಗಳಲ್ಲಿ ದಾಖಲಾಗುವ ಮಾಹಿತಿಯನ್ನು ಪೊಲೀಸ್ ಇಲಾಖೆಗೆ ಮಾತ್ರ ನೀಡಬೇಕು ಎಂದು ಸೂಚಿಸಿದ್ದಾರೆ.