ಶಿವಮೊಗ್ಗ: ನನ್ನ ಬಳಿ 19 ಸಿಡಿಗಳಿವೆ ಎಂದು ನಾನು ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಲಾಲಿ, ನನ್ನ ಬಳಿ 19 ಸಿಡಿಗಳಿವೆ ಎಂದು ಹೇಳಿರುವುದಕ್ಕೆ ಅಥವಾ ಸಿಡಿಗಳಿವೆ ಎಂಬುದಕ್ಕೆ ಒಂದೇ ಒಂದು ದಾಖಲೆಯಿದ್ದರೆ ಕೊಡಿ. ಇವೆಲ್ಲವೂ ಮಾಧ್ಯಮಗಳ ಸೃಷ್ಟಿ ಎಂದರು.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದೊಡ್ಡ ಷಡ್ಯಂತ್ರ:
ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮುಲಾಲಿ, ಇದೊಂದು ದೊಡ್ಡ ಷಡ್ಯಂತ್ರ. ಸಚಿವರ ಬೆಳವಣಿಗೆಯನ್ನು ಸಹಿಸದ ಕೆಲವರು ಷಡ್ಯಂತ್ರ ನಡೆಸಿದ್ದಾರೆ. ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಭಾಗದ ಶಾಸಕರುಗಳು ತಾಂತ್ರಿಕವಾಗಿ ಮುಗ್ಧರಾಗಿದ್ದಾರೆ. ಅವರೆಲ್ಲರೂ ಬಹಳ ಎಚ್ಚರಿಕೆಯಿಂದಿರಬೇಕು. ಎಲ್ಲಿಯೂ ಮೈ ಮರೆಯಬಾರದು ಎಂದು ಸಲಹೆ ನೀಡಿದರು.
ರಾಜಕಾರಣಿಗಳು ಎಚ್ಚರಿಕೆಯಿಂದಿರುವಂತೆ ಸಲಹೆ:
ರಾಜಕಾರಣಿಗಳು ಬೆಳಗಾವಿ ಅಧಿವೇಶನಕ್ಕೆ ಬಂದು ಶನಿವಾರ, ಭಾನುವಾರವಾದ ಕೂಡಲೇ ಗೋವಾಕ್ಕೆ ತೆರಳುತ್ತಾರೆ. ಈ ರೀತಿ ಅವರು ಮಾಡಬಾರದು. ಅವರು ಅವರ ಎಚ್ಚರಿಕೆಯಲ್ಲಿ ಇರಬೇಕು. ನಾಳೆ ಎಲ್ಲಿಯಾದರೂ ಮತ್ತೆ ಸಿಕ್ಕಿಹಾಕಿಕೊಳ್ಳುವ ಸಂಭವವಿರುತ್ತದೆ ಎಂದು ಹೇಳಿದರು.
ಪ್ರಾಮಾಣಿಕ ಹೋರಾಟಗಾರರು ಕಡಿಮೆ:
ಪ್ರಾಮಾಣಿಕ ಹೋರಾಟಗಾರರು ಕೇವಲ ಬೆರಳೆಣಿಕಯಷ್ಟಿದ್ದಾರೆ. ನ್ಯಾಯಬದ್ಧವಾಗಿ ವ್ಯವಸ್ಥಿತವಾಗಿ ಹೋರಾಟ ಮಾಡಿದರೆ, ಖಂಡಿತ ಗೆಲುವು ಸಿಗಲಿದೆ. ಸಚಿವರ ಪ್ರಕರಣದಲ್ಲಿ, ಸಂತ್ರಸ್ತೆಯಾಗಲಿ, ಅವರ ಗಂಡನಾಗಲಿ ದೂರು ನೀಡಿಲ್ಲ. ಅವರ್ಯಾರು ದೂರು ನೀಡಿಲ್ಲವಾದರೆ ಈ ಪ್ರಕರಣವೂ ಅಲ್ಲಿಯೇ ಅಂತ್ಯವಾಗಲಿದೆ.
ನನ್ನ ವಿರುದ್ಧ ಮಹಿಳೆಯೋರ್ವರ ದೂರು:
ಬೆಂಗಳೂರಿನ ಕಬ್ಬನ್ಪೇಟೆ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಮಹಿಳೆಯೋರ್ವರು ದೂರು ನೀಡಿದ್ದಾರೆ ಎಂಬುದು ತಿಳಿದು ಬಂದಿದೆ. ನನಗೆ ವಾಟ್ಸಪ್ ಮೂಲಕ ನೋಟಿಸ್ ಬಂದಿದೆ. ನಾನು ನನ್ನದೇ ಆದ ಕೆಲಸದಲ್ಲಿ ತೊಡಗಿಸಿಕೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ತೆರಳುತ್ತೇನೆ ಎಂದರು.
ಸಿಎಂ ಹೇಳಿಕೆ ಖಂಡನೀಯ:
ಹಾದಿ ಬೀದಿಯಲ್ಲಿ ಹೋಗುವವರೆಲ್ಲ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳುತ್ತಾರೆ ಎಂದು ಮುಖ್ಯಮಂತ್ರಿಗಳು ಸದನದಲ್ಲಿ ಹೇಳಿದ್ದಾರೆ. ಮುಖ್ಯಮಂತ್ರಿಗಳ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಒಬ್ಬ ಘನತೆವೆತ್ತ ಮುಖ್ಯಮಂತ್ರಿಗಳು ಈ ರೀತಿ ಮಾತನಾಡಬಾರದು. ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಈ ರೀತಿ ಹೇಳಿರುವುದು ತಪ್ಪು. ಆರ್ಟಿಇ ನಲ್ಲಿ ದನ ಕಾಯುವವನಿಂದ ಹಿಡಿದು ಯಾರು ಬೇಕಾದರೂ ಮಾಹಿತಿ ತೆಗೆದುಕೊಳ್ಳಬಹುದು. ಬುದ್ಧಿವಂತರೇ ಕೇಳಬೇಕಂತೇನೂ ನಿಯಮ ಇಲ್ಲ. ಅನಕ್ಷರಸ್ಥ ಕೂಡ ಮಾಹಿತಿ ಕೇಳಬಹುದು.
ಓದಿ:CD ಮಾಡಿಸಿದ್ದು "ಅವರೇ": ಸಹಕಾರ ಸಚಿವ ಸೋಮಶೇಖರ್
ಹೋರಾಟಗಾರರನ್ನು ಈ ರೀತಿ ಹತ್ತಿಕ್ಕುವ ಪ್ರಯತ್ನ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಾನು ಆಸೆ, ಆಮಿಷಗಳಿಗೆ ಬಲಿಯಾಗದೆ, ಕಾನೂನು ವ್ಯಾಪ್ತಿಯಲ್ಲಿ ನನ್ನ ಕೆಲಸ ಮಾಡುತ್ತಿದ್ದೇನೆ. ನಾನು ಹೆದರಿಕೆಗೆ, ಬೆದರಿಕೆಗೆ ಬಗ್ಗುವವನಲ್ಲ ಎಂದು ತಿಳಿಸಿದರು.
ನನ್ನನ್ನು ಗೆಲ್ಲಿಸಿ...
ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಕನ್ನಡ ಸಾಹಿತ್ಯ ಪರಿಷತ್ ನಿರ್ಮಾಣಕ್ಕಾಗಿ ಮೇ 9 ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಯಲ್ಲಿ ನನನ್ನು ಗೆಲ್ಲಿಸಿ ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ್ ಮುಲಾಲಿ ಮತದಾರರಲ್ಲಿ ಮನವಿ ಮಾಡಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಬೇರೂರಿರುವ ಭ್ರಷ್ಟಾಚಾರದ ಬೇರುಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲಿಕ್ಕಾಗಿ ಮತ್ತು ನಾಡಿನ ಯುವ ಸಮುದಾಯವನ್ನು ಸಂಘಟಿಸಿ ಒಂದು ಸಶಕ್ತ ಕನ್ನಡ ಪಡೆ ಸಾಹಿತ್ಯ ಪರಿಷತ್ನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಹಕಾರಿಯಾಗಿರುವ ಹಿತದೃಷ್ಟಿಯಿಂದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ಹಾಗಾಗಿ ಮತದಾರರು ಮೇ 9 ರಂದು ನಡೆಯುವ ಚುನಾವಣೆ ಯಲ್ಲಿ ಹೆಚ್ಚಿನ ಮತ ನೀಡುವ ಮೂಲಕ ಗೆಲವು ಸಾಧಿಸುವಂತೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.