ಶಿವಮೊಗ್ಗ: ಇಲ್ಲಿನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೇ 27 ರಿಂದ ಹೃದ್ರೋಗದ ಹೊರ ರೋಗಿಗಳ ವಿಭಾಗ ಪ್ರಾರಂಭ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿ ಮಾತನಾಡಿದ ಅವರು, ಹೃದ್ರೋಗ ವಿಭಾಗದ ಒಪಿಡಿಯಲ್ಲಿ ನಿತ್ಯ 80 ರಿಂದ 100 ಜನ ಹೃದಯ ಸಂಬಂಧಿ ರೋಗಿಗಳನ್ನು ತಪಾಸಣೆ ಮಾಡಲಾಗುತ್ತದೆ. ಈ ಒಪಿಡಿಯಲ್ಲಿ ಹೃದ್ರೋಗ ತಜ್ಞ ಡಾ.ಪರಮೇಶ್ವರ್ ಹಾಗೂ ಡಾ.ಮೂರ್ತಿ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಇಲ್ಲಿ ಹೃದಯ ಸಂಬಂಧಿತ ಚಿಕಿತ್ಸೆಗಳಾದ ಆಂಜಿಯೂಗ್ರಾಂ, ಅಂಜಿಯೋ ಪ್ಲಾಸ್ಟಿ, ಸ್ಟಂಟ್ ಅಳವಡಿಕೆ, ಕವಾಟಗಳ ಚಿಕಿತ್ಸೆ ಮತ್ತು ಹುಟ್ಟಿನಿಂದಲೇ ಬಂದಂತಹ ಹೃದಯ ಸಂಬಂಧಿ ಚಿಕಿತ್ಸೆ ದೊರೆಯಲಿದೆ ಎಂದರು.
ಇದೇ ವೇಳೆ, ಪಂಚಾಯಿತಿ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಕೊರೊನಾ ಇರುವುದರಿಂದ ಗ್ರಾಮ ಪಂಚಾಯಿತಿ ಚುನಾವಣೆಯನ್ನು ನಡೆಸುವುದು ಬೇಡ ಎಂದು ಜನರು ಹೇಳುತ್ತಿದ್ದಾರೆ. ಹಾಗಾಗಿ ಸಂಪುಟದ ಒಪ್ಪಿಗೆ ಪಡೆದು ಚುನಾವಣೆಯನ್ನು ಮುಂದೂಡಲಾಗಿದೆ ಎಂದರು.
ಸಂಸದ ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಕೆ.ಬಿ. ಅಶೋಕ್ ನಾಯ್ಕ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಸಿಮ್ಸ್ ನಿರ್ದೆಶಕ ಡಾ.ಗುರುಪಾದಪ್ಪ ಸೇರಿ ಇತರರು ಈ ವೇಳೆ, ಹಾಜರಿದ್ದರು.