ಶಿವಮೊಗ್ಗ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರೈತ ಕುಲವನ್ನು ಸರ್ಕಾರ ನಾಶ ಮಾಡಲು ಹೊರಟಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರೈತ ಕುಲವನ್ನೇ ನಾಶ ಮಾಡುವುದರ ಜೊತೆಗೆ ಆಹಾರ ಭದ್ರತೆಯನ್ನು ನಾಶ ಮಾಡುವ ಮೂಲಕ ಸ್ವಾತಂತ್ರ್ಯ ಪೂರ್ವ ಸಂದರ್ಭದ ಉಳಿಗಮಾನ್ಯ ಪದ್ಧತಿಗೆ ಸರ್ಕಾರ ಕರೆದುಕೊಂಡು ಹೋಗುತ್ತಿದೆ ಎಂದರು.
ಶೇಕಡಾ 80ರಷ್ಟು ಜನ ಸಣ್ಣ ಮತ್ತು ಅತಿ ಸಣ್ಣ ರೈತರು ಮೊದಲೇ ಸಾಲದಲ್ಲಿ ನರಳುತ್ತಿರುವುದರಿಂದ ಖಾಸಗಿ ಫೈನಾನ್ಸ್ ಮತ್ತು ಬ್ಯಾಂಕ್, ಸೊಸೈಟಿ ಸಾಲಗಾರರ ಕಿರುಕುಳಕ್ಕೆ ಹೆದರಿ ಭೂಮಿಯನ್ನು ಮಾರಿಕೊಂಡು ಕೃಷಿಕ ಕಾರ್ಮಿಕನಾಗುತ್ತಾನೆ. ಈ ಕಾಯ್ದೆ ಕಾರ್ಪೊರೇಟ್ ಕಂಪನಿಗಳಿಗೆ, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅನುಕೂಲವಾಗುತ್ತದೆಯೇ ಹೊರತು ಕೃಷಿಗೆ ಅನುಕೂಲ ಮಾಡಲು ಸಾಧ್ಯವಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಬಾರದು ಎಂದು ಒತ್ತಾಯಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೊನಾ ಸಂಕಷ್ಟ ಸಂದರ್ಭದಲ್ಲಿಯೇ ರೈತ ವಿರೋಧಿ ಕಾಯ್ದೆಗಳಾದ ಭೂ ಸ್ವಾಧೀನ ಕಾಯ್ದೆ, ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ವಿದ್ಯುಚ್ಛಕ್ತಿ ಕಾಯ್ದೆಗಳನ್ನು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಚರ್ಚೆ ಮಾಡದೇ ಸುಗ್ರೀವಾಜ್ಞೆ ಹೊರಡಿಸುತ್ತಿರುವುದರ ಬಗ್ಗೆ ದೇಶದ ಜನತೆಗೆ ಉತ್ತರ ಹೇಳಬೇಕಿದೆ.
ಇಂತಹ ಜನ ವಿರೋಧಿ, ರೈತ ವಿರೋಧಿ ಕಾಯ್ದೆಗಳಿಂದ ಮುಂದಿನ ದಿನಗಳಲ್ಲಿ ಸರ್ಕಾರವನ್ನು ತಿರಸ್ಕಾರ ಮಾಡಬಹುದೆಂಬ ಎಚ್ಚರಿಕೆಯಿಂದ ಈ ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಎಚ್ಚರಿಸಿದರು.