ಶಿವಮೊಗ್ಗ: ಮನೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲೊಂದು ಕುಟುಂಬ ಮನೆಯಲ್ಲಿ ಪ್ರತಿ ವರ್ಷ ಗೌರಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುತ್ತದೆ. ಹೀಗೆ ವಿಶೇಷವಾಗಿ ಅಲಂಕಾರ ಮಾಡಿ ಗೌರಿ ಪ್ರತಿಷ್ಠಾಪಿಸಲ್ಪಟ್ಟಿರುವುದು ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿ ಗ್ರಾಮದಲ್ಲಿ. ಈ ಗ್ರಾಮದ ಜಗದೀಶ್ ಎಂಬುವವರ ಮನೆಯಲ್ಲಿ ಕಳೆದ 400 ಕ್ಕೂ ಅಧಿಕ ವರ್ಷಗಳಿಂದ ತಪ್ಪದೇ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.
ಗೌರಿ ಮೂರ್ತಿಯ ವಿಶೇಷತೆ: ಪ್ರತಿ ವರ್ಷ ಗೌರಿ ಹಬ್ಬದ ದಿನ ಗೌರಿಯನ್ನು ಪ್ರತಿಷ್ಠಾಪಿಸಿ ಮೂರು ದಿನದ ನಂತರ ವಿಸರ್ಜನೆ ಮಾಡಲಾಗುತ್ತದೆ. ಜಗದೀಶ್ ಅವರ ಕುಟುಂಬ ಸುಮಾರು 400 ವರ್ಷಗಳ ಹಿಂದೆ ವಿಜಯಪುರದಿಂದ ವಲಸೆ ಬಂದು ಕುಂಚೇನಹಳ್ಳಿಯಲ್ಲಿ ನೆಲೆಸಿದೆ. ಅಂದಿನಿಂದ ಇಂದಿನವರೆಗೂ ಇವರ ಕುಟುಂಬಸ್ಥರು ಗೌರಿ ಪೂಜೆ ನಡೆಸಿಕೊಂಡು ಬಂದಿದ್ದಾರೆ. ಗೌರಿಯು ಆನೆ ಮೇಲೆ ಕುಳಿತು ಕೊಂಡಿದ್ದಾಳೆ. ಇದರಿಂದ ಈಕೆಗೆ ಗಜಗೌರಿ ಎಂದು ಕರೆಯುತ್ತಾರೆ. ಈ ಮೂರ್ತಿಯನ್ನು ಮರದಿಂದ ನಿರ್ಮಾಣ ಮಾಡಲಾಗಿದೆ.
ಆದರೆ, ಗೌರಿ ಮುಖವನ್ನು ಮಾತ್ರ ಮಣ್ಣಿನಿಂದ ಮಾಡಲಾಗಿದೆ. ನಿರ್ಮಾಣವಾದಾಗಿನಿಂದ ಗೌರಿ ಮೂರ್ತಿ ಯಾವ ಬಣ್ಣದಲ್ಲಿತ್ತೋ, ಈಗಲೂ ಅದೇ ಬಣ್ಣದಲ್ಲಿ ಇರುವುದು ವಿಶೇಷವಾಗಿದೆ. ದೇವಿಗೆ ವಿವಿಧ ಭಕ್ಷ್ಯಗಳನ್ನು ಮಾಡಿ, ನೈವೇದ್ಯ ಮಾಡಲಾಗುತ್ತದೆ. ವಿಸರ್ಜನೆ ಮಾಡುವ ದಿನ ತುಂಬೆ ಸೂಪ್ಪಿನ ಸಾರು ಮಾಡುವುದು ವಿಶೇಷವಾಗಿದೆ.