ಶಿವಮೊಗ್ಗ: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಗೆಲ್ಲಲು ಸಿದ್ದರಾಮಯ್ಯನವರು ಸಹಕರಿಸಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸಿದ್ದರಾಮಯ್ಯವರಿಗೆ ಕುಟುಕಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನೀವು ಮುಸ್ಲಿಂರ ಪರ ಎನ್ನುವುದು ಸುಳ್ಳು ಅಂತ ದೇಶದ ಜನರಿಗೆ ತಿಳಿದಿದೆ. ನೀವು ಮುಸ್ಲಿಮರನ್ನು ಬಳಸಿಕೊಂಡು ಕೊನೆಗೆ ಕೈ ಕೊಡುವುದು ಎಂಬುದನ್ನು ತೋರಿಸಿದ್ದೀರಿ ಎಂದಿದ್ದಾರೆ.
ಬಿಜೆಪಿಯನ್ನು ಕೋಮು ಶಕ್ತಿ ಎನ್ನುವುದನ್ನು ಬಿಡಬೇಕು. ಜೆಡಿಎಸ್ ಅನ್ನು ಯಾರೂ ನಂಬಲ್ಲ, ರಾಜ್ಯದ ಜನ ಬಿಜೆಪಿ ಪರ ಬೆಂಬಲ ಕೊಟ್ಟಿರುವುದು ಕಂಡು ಬಂದಿದೆ. ರಾಜ್ಯದಲ್ಲಿ ನಮಗೆ ಪೂರ್ಣ ಬಹುಮತ ನೀಡಿಲ್ಲ. ಇದರಿಂದ ನಮಗೆ ಮುಂಬರುವ ಚುನಾವಣೆಯಲ್ಲಿ ಪೂರ್ಣ ಬಹುಮತ ನೀಡಬೇಕು. ಕೇಂದ್ರ ಸರ್ಕಾರ ರಚನೆ ಮಾಡಲು ಮೋದಿ ಅವರಿಗೆ ಪೂರ್ಣ ಬಹುಮತ ನೀಡಿದಂತೆ ರಾಜ್ಯದಲ್ಲೂ ನೀಡಿ. ರಾಜ್ಯದಲ್ಲಿ ಸಂಘಟನೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಸಂಘಟನೆ, ಅಭಿವೃದ್ಧಿ, ಮೋದಿ ಮೂರು ಅಂಶವನ್ನು ಇಟ್ಟುಕೊಂಡು ಜನ ನಮಗೆ ಬೆಂಬಲ ನೀಡಬೇಕು ಎಂದು ವಿನಂತಿಸಿಕೊಂಡರು.
ಸಿದ್ದರಾಮಯ್ಯ ಕುರುಬ ನಾಯಕರನ್ನೇ ರಾಜಕೀಯವಾಗಿ ಮುಗಿಸಿಬಿಟ್ಟರು:ಸಿದ್ದರಾಮಯ್ಯನವರು, ರೇವಣ್ಣ, ಹೆಚ್ ವಿಶ್ವನಾಥ್, ಬೈರತಿ ಬಸವರಾಜ್, ಎಂ.ಟಿ.ಬಿ ನಾಗರಾಜ್ ಅವರನ್ನೇ ಕೈಬಿಟ್ಟರು. ಬಾದಾಮಿಯಲ್ಲಿ ಚಿಮ್ಮನಕಟ್ಟಿಗೂ ಮೋಸ ಮಾಡಿದ್ದರು. ಕುರುಬರನ್ನೇ ಬಿಡದ ಸಿದ್ದು, ಹಿಂದುಳಿದವರಿಗೆ ಏನು ಅನುಕೂಲ ಮಾಡಿಕೊಟ್ಟಿದ್ದೀರಿ. ವೀರಶೈವ ಲಿಂಗಾಯತ ಬೇರ್ಪಡಿಸಿ ಅಧಿಕಾರ ಕಳೆದುಕೊಂಡರು. ಹಿಜಾಬ್ ವಿಚಾರದಲ್ಲಿ ವಿದ್ಯಾರ್ಥಿನಿಯರಿಗೆ ಬುದ್ಧಿ ಹೇಳಲಿಲ್ಲ. ಕೋರ್ಟ್ ತೀರ್ಪು ಬಳಿಕ ಬಂದ್ ಮಾಡಿದಾಗ ಬುದ್ಧಿ ಹೇಳಲಿಲ್ಲ. ಹುಬ್ಬಳ್ಳಿ ಗಲಾಟೆಯಲ್ಲಿ ಬಂಧನವಾದವರನ್ನು ಅಮಾಯಕರು ಎಂದು ಕರೆದರು. ಅಮಾಯಕರ ಬಂಧನ ಅಂತ ಹೇಳಿದ್ರು. ಮುಸ್ಲಿಮರನ್ನು ಸಿದ್ದರಾಮಯ್ಯ ಹಾಳು ಮಾಡಿಬಿಟ್ಟರು. ದಲಿತ ಹಿಂದುಳಿದ, ಅಲ್ಪ ಸಂಖ್ಯಾತರ ಹೆಸರಿನಲ್ಲಿ ಸಿಎಂ ಆಗಿ ಕೈಬಿಟ್ಟರು ಎಂದು ಈಶ್ವರಪ್ಪ ಟೀಕಿಸಿದರು.