ಶಿವಮೊಗ್ಗ: ನಾಪತ್ತೆಯಾಗಿದ್ದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯ ಎಫ್ಡಿಎ ಗಿರಿರಾಜ್ ಧರ್ಮಸ್ಥಳದಲ್ಲಿ ಪತ್ತೆಯಾಗಿದ್ದು, ಉಜಿರೆಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸೆಪ್ಟೆಂಬರ್ 28 ರಂದು ಮನೆಯಿಂದ ಹೊರ ಹೋಗಿದ್ದ ಗಿರಿರಾಜ್ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಮ್ಮ ಕುಟುಂಬ ಹಾಗೂ ಕಚೇರಿ ವಾಟ್ಸಪ್ ಗ್ರೋಪ್ಗೆ ಮೆಸೇಜ್ ಮಾಡಿ ಫೋನ್ ಸ್ವೀಚ್ ಆಫ್ ಮಾಡಿ ಕಾಣೆಯಾಗಿದ್ದರು. ಅಂದು ರಾತ್ರಿ ಗಿರಿರಾಜ್ ಪತ್ನಿ ಜ್ಯೋತಿ ಜಯನಗರ ಪೊಲೀಸ್ ಠಾಣೆಯಲ್ಲಿ ಪತಿ ಕಾಣೆಯಾಗಿರುವ ಬಗ್ಗೆ ದೂರು ದಾಖಲು ಮಾಡಿದ್ದರು.
ನಂತರ ಮೊಬೈಲ್ ಸ್ವೀಚ್ ಆಫ್ ಆಗಿದ್ದ ಜಾಗವಾದ ಭದ್ರಾವತಿಯ ಕಾರೇಹಳ್ಳಿಯಲ್ಲಿ ಹುಡುಕಾಟ ನಡೆಸಿದ್ದರು. ಬಳಿಕ ಪಕ್ಕದಲ್ಲಿ ಹರಿಯುವ ಭದ್ರಾ ಕಾಲುವೆಯಲ್ಲಿ ಎರಡು ದಿನ ಹುಡುಕಾಟ ನಡೆಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಗಿರಿರಾಜ್ ಕಾಣೆಯಾದ ದಿನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದ ಎಟಿಎಂನಲ್ಲಿ 15 ಸಾವಿರ ಹಣ ತೆಗೆದುಕೊಂಡು ಕಾಣೆಯಾಗಿದ್ದರು.
ಇಂದು ಧರ್ಮಸ್ಥಳದಲ್ಲಿ ಸ್ಥಳೀಯರಾದ ನಿರಂಜನ ಅವರು ಗಿರಿರಾಜ್ ಅವರನ್ನು ಗುರುತಿಸಿ ಮಾತನಾಡಿಸಿದ್ದಾರೆ. ಸುಸ್ತಾಗಿದ್ದ ಗಿರಿರಾಜ್ ಎಚ್ಚೆತ್ತುಕೊಂಡ ಬಳಿಕ ನಿರಂಜನರವರ ಮೊಬೈಲ್ನಿಂದ ತಮ್ಮ ಕುಟುಂಬದವರ ಜೊತೆ ಮಾತನಾಡಿ ಖುಷಿ ಪಟ್ಟಿದ್ದಾರೆ. ಸರ್ಕಾರಿ ನೌಕರರ ಸಂಘದವರು ಗಿರಿರಾಜ್ ರನ್ನು ಉಜರೆಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಗಿರಿರಾಜ್ ಬದುಕಿರುವುದು ಮನೆಯವರಿಗೆ ಖುಷಿಯ ವಿಚಾರವಾಗಿದೆ.