ಶಿವಮೊಗ್ಗ:ಹೆಚ್ಚುವರಿ ಸಾಲದ ಹಣ ಪಾವತಿಸುವಂತೆ ಸೂಚಿಸಿದ ಬ್ಯಾಂಕ್ ನೋಟಿಸ್ ಖಂಡಿಸಿ ರೈತ ಸಂಘ ನೇತೃತ್ವದಲ್ಲಿ ರೈತರು ಇಲ್ಲಿನ ಕೆನರಾ ಬ್ಯಾಂಕ್ ಮುಖ್ಯಕಚೇರಿ ಮುಂಭಾಗದಲ್ಲಿ ನಿನ್ನೆ (ಬುಧವಾರ) ಪ್ರತಿಭಟನೆ ನಡೆಸಿದ್ದಾರೆ.
ತಾಲೂಕಿನ ಹೊಳೆಹಟ್ಟಿ ಗ್ರಾಮದ ರೈತ ಕುಪ್ಪೇಂದ್ರಪ್ಪ ಎಂಬವರು ಹೊಳಲೂರು ಗ್ರಾಮದ ಕೆನರಾ ಬ್ಯಾಂಕ್ನಲ್ಲಿ 2004ರಲ್ಲಿ 9.52 ಲಕ್ಷ ರೂ ಸಾಲ ಪಡೆದಿದ್ದರು. ಇದರಲ್ಲಿ 4.50 ಲಕ್ಷ ರೂ. ಮರುಪಾವತಿ ಮಾಡಿದ್ದಾರೆ. ಉಳಿದ 5 ಲಕ್ಷ ಮರುಪಾವತಿ ಮಾಡಲು ಸಿದ್ಧರಿದ್ದಾರೆ. ಸಾಲ ಪಡೆದ ಕುಪೇಂದ್ರಪ್ಪ ನಂತರದ ದಿನಗಳಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಪತ್ನಿಯ ಮೆದುಳಿನಲ್ಲಿ ರಕ್ತಸ್ರಾವವಾಗಿದ್ದರಿಂದ ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕುಪೇಂದ್ರಪ್ಪನವರ ತಾಯಿ 95 ವರ್ಷದ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಈ ಮೂವರ ಚಿಕಿತ್ಸೆಗಾಗಿ ಇರುವ ಭೂಮಿ ಮಾರಾಟ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಕುಪ್ಪೇಂದ್ರಪ್ಪ ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗಿದ್ದಾಗ, ಕೆನರಾ ಬ್ಯಾಂಕ್ನವರು ಅಕ್ಟೋಬರ್ 30ರಂದು ಮನೆ ಜಪ್ತಿ ನೋಟಿಸ್ ಅಂಟಿಸಿ ಬಂದಿದ್ದಾರೆ. 1 ಕೋಟಿ ರೂ. ಬಾಕಿ ಸಾಲ ಪಾವತಿಸಲು ನೋಟಿಸ್ನಲ್ಲಿ ತಿಳಿಸಲಾಗಿದೆ. ರಾಜ್ಯ ಸರ್ಕಾರ ಬರ ಘೋಷಣೆ ಮಾಡಿದಾಗ ಈ ರೀತಿ ನೋಟಿಸ್ ನೀಡಿರುವುದು ಎಷ್ಟು ಸರಿ ಎಂದು ರೈತ ಸಂಘ ಪ್ರಶ್ನಿಸಿದೆ.
ಕುಪ್ಪೇಂದ್ರಪ್ಪನವರ ಪುತ್ರ ಆದರ್ಶ ಮಾತನಾಡಿ, ''ಬ್ಯಾಂಕ್ನವರು ನಮ್ಮ ಮನೆಗೆ ಈಗ ಜಪ್ತಿ ನೋಟಿಸ್ ಅಂಟಿಸಿದ್ದಾರೆ. ನಾನು ಬಾಕಿ ಹಣ ಕಟ್ಟಲು ಸಿದ್ಧನಿದ್ದೇನೆ. ಆದರೆ, ಬ್ಯಾಂಕ್ನವರು ಒನ್ ಟೈಂ ಸೆಟ್ಲ್‌ಮೆಂಟ್ ಎಂದು 30 ಲಕ್ಷ ರೂ. ಹಣ ಕಟ್ಟಲು ಹೇಳಿದ್ದರು. ಆದರೆ, ನಮ್ಮ ಬಳಿ ಇರುವ ಒಂದೂವರೆ ಎಕರೆ ಭೂಮಿ ಮಾರಾಟ ಮಾಡಿದ್ರೂ ಅಷ್ಟೊಂದು ಹಣ ಬರಲ್ಲ'' ಎಂದರು.
ಬ್ಯಾಂಕ್ ಅಧಿಕಾರಿ ಮಾತನಾಡಿ, ''ಇದು 2004ರಲ್ಲಿ ತೆಗೆದುಕೊಂಡಿರುವ ಸಾಲ. ಈ ಸಾಲವನ್ನು 2009ಕ್ಕೆ ಎನ್ಪಿಎ ಅಡಿಯಲ್ಲಿ ಸೇರಿಸಲಾಗಿದೆ. ನಾವು ಆರ್ಬಿಐ ನಿಯಮಗಳ ಪ್ರಕಾರ ನಡೆಯುತ್ತಿದ್ದೇವೆ. ಬ್ಯಾಂಕ್ ತನ್ನದೇ ಆದ ಲೆಕ್ಕಾಚಾರದಲ್ಲಿ ನಡೆಯುವುದಿಲ್ಲ. ಎನ್ಪಿಎಗೆ ಸೇರಿಸಿರುವುದಿಂದ ಈ ಸಾಲದ 1 ಕೋಟಿ ರೂ.ಗೆ ಹೆಚ್ಚಾಗಿದೆ. ನಾವು ಅವರಿಗೆ ಆಫರ್ ಸಹ ನೀಡಿದ್ವಿ. ನಾವು ಹಿಂದೆ ಒನ್ ಟೈಂ ಸೆಟ್ಲ್ಮೆಂಟ್ಗೆ ಕರೆಯಿಸಿದ್ವಿ, ಆಗ ಅವರು ಬರಲಿಲ್ಲ. ನಮ್ಮ ಜಿಲ್ಲಾ ಮಟ್ಟದ ಅಧಿಕಾರಿಗಳು 20 ಲಕ್ಷ ರೂ. ಸಾಲ ಪಾವತಿ ಮಾಡಿಸಲು ನಿರ್ಧರಿಸಿದ್ದರು. ಸಾಲ ಪಡೆದ ರೈತ ಇನ್ನೂ ಕಡಿಮೆ ಹಣ ಕಟ್ಟುತ್ತೇನೆ ಎಂದು ಹೇಳಿದ್ದರು. ಈ ವಿಚಾರವನ್ನು ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ. ನಂತರ ನಾವು ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ" ಎಂದು ಹೇಳಿದರು.
ಇದನ್ನೂ ಓದಿ:ಶಿವಮೊಗ್ಗ: ದಾರಿತಪ್ಪಿ ಎರಡು ರಾತ್ರಿ, ಹಗಲು ಕಾಡಿನಲ್ಲಿ ವಾಸ: ಸುರಕ್ಷಿತವಾಗಿ ಮನೆ ಸೇರಿದ 85 ವರ್ಷದ ವೃದ್ಧೆ