ಶಿವಮೊಗ್ಗ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಸಂವಿಧಾನ ವಿರೋಧಿ ಮಸೂದೆಗಳ ಕುರಿತು ಮತದಾರರಿಗೆ ವಿವರಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಲಾಗುವುದು ಎಂದು ಮಾಜಿ ಸಚಿವ ಶಿವಮೂರ್ತಿ ನಾಯ್ಕ ಹೇಳಿದರು.
ಮಾಜಿ ಸಚಿವ ಶಿವಮೂರ್ತಿ ನಾಯ್ಕ ಮಾತನಾಡಿದರು ನಗರದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಗ್ರಾಮಾಂತರ ವಿಭಾಗದ ಚುನಾವಣಾ ವೀಕ್ಷಕ ಶಿವಮೂರ್ತಿ ನಾಯ್ಕ, ಗೋಹತ್ಯೆ, ಲವ್ ಜಿಹಾದ್, ಭೂಸುಧಾರಣೆ ಮುಂತಾದ ಮಾನವ ವಿರೋಧಿ ಹಾಗೂ ಸಂವಿಧಾನ ವಿರೋಧಿ ಮಸೂದೆಗಳನ್ನು ಜಾರಿಗೆ ತಂದಿರುವ ಮನುವಾದಿ ಬಿಜೆಪಿ ನಿರ್ಧಾರಗಳನ್ನು ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತದಾರರಿಗೆ ವಿವರಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಲಾಗುವುದು ಎಂದ್ರು.
ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಮಂಡಿಸಿರುವುದು ಆತುರದ ನಿರ್ಧಾರ, ಅವರಿಗೆ ಇಷ್ಟವಾದ ಆಹಾರವನ್ನು ಸೇವಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ನಮ್ಮ ದೇಶದಲ್ಲಿ ಗೋ ಮಾತ್ರ ಅಲ್ಲ ಕುರಿ,ಕೋಳಿ ಮೇಕೆಗಳೆಲ್ಲವೂ ಇದೆ. ಇವುಗಳನ್ನೆಲ್ಲ ನಿಷೇಧ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಆಹಾರ ಪದ್ಧತಿಯ ಮೇಲೆ ನಿರ್ಬಂಧ ಹಾಕುವುದು ಸಂವಿಧಾನದ ಉಲ್ಲಂಘನೆ ಕೂಡ ಆಗುತ್ತದೆ ಎಂದ್ರು.
ಪ್ರೀತಿಗೆ ಇಡೀ ಜಗತ್ತೇ ಸೋಲುತ್ತದೆ, ಪರಸ್ಪರ ಒಪ್ಪಿಗೆ ಮೇರೆಗೆ ಯಾವ ಧರ್ಮ-ಜಾತಿಯ ಬೇಕಾದ್ರೂ ಮದುವೆಯಾಗಬಹುದು, ಇದಕ್ಕೆ ಲವ್ ಜಿಹಾದ್ ಹೆಸರನ್ನು ಬಿಜೆಪಿಯವರು ಯಾಕೆ ಕಟ್ಟುತ್ತಿದ್ದಾರೆ ಗೊತ್ತಾಗುತ್ತಿಲ್ಲ ಎಂದರು. ಲವ್ ಜಿಹಾದ್ ಕಾಯ್ದೆ ಮಂಡಿಸುವ ಬಿಜೆಪಿಯವರ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಬಿಜೆಪಿ ನಾಯಕರು ಹಾಗೂ ಅವರ ಮಕ್ಕಳು ಬೇರೆ ಜಾತಿಯವರನ್ನು ಮದುವೆ ಆಗಿಲ್ಲವೇ? ಎಂದು ಪ್ರಶ್ನಿಸಿದರು.
ಶಿವಮೊಗ್ಗ ಜಿಲ್ಲೆ ಹೋರಾಟದ ತವರೂರು, ಇಲ್ಲಿ ಅನೇಕ ಹೋರಾಟಗಳು ನಡೆದಿವೆ. ಇದೇ ನೆಲದಿಂದ ಬಂದ ಬಿ ಎಸ್ ಯಡಿಯೂರಪ್ಪನವರು ರೈತ ವಿರೋಧಿ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ರೈತ ಸಮುದಾಯವನ್ನು ನಾಶ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿಯವರು ಕೇವಲ ಧಾರ್ಮಿಕ ಭಾವನೆಗಳನ್ನು ಮುಗ್ಧ ಜನರ ಮೇಲೆ ಹೇರಿ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಆಪರೇಷನ್ ಕಮಲ ಮಾಡಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ್ರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಜನವಿರೋಧಿ, ರೈತ ವಿರೋಧಿ ಕಾಯ್ದೆಗಳನ್ನು ಸಂಪೂರ್ಣ ರದ್ದು ಮಾಡುತ್ತೇವೆ ಎಂದು ಶಿವಮೂರ್ತಿ ನಾಯ್ಕ ತಿಳಿಸಿದ್ರು.