ಶಿವಮೊಗ್ಗ: ನಗರದ ನೆರೆ ಪರಿಹಾರ ವಿತರಣೆಯಲ್ಲಿ ಮಹಾನಗರ ಪಾಲಿಕೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಾಗೂ ಜೆಡಿಎಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದಲ್ಲಿ ತುಂಗಾ ನದಿಯಿಂದ ಪ್ರವಾಹ ಉಂಟಾಗಿ, ನದಿಯ ಇಕ್ಕೆಲಗಳ ಬಡಾವಣೆಗಳಿಗೆ ನೀರು ನುಗ್ಗಿತ್ತು. ಇದರಿಂದ ನಗರದಲ್ಲಿ ಸುಮಾರು 1,500 ಮನೆಗಳು ಹಾನಿಗೊಳಗಾಗಿದ್ದವು. ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ಮಹಾನಗರ ಪಾಲಿಕೆ ವಿಫಲವಾಗಿದೆ ಎಂದು ಆರೊಪಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ನೆರೆ ಪರಿಹಾರ ವಿತರಣೆಯಲ್ಲಿ ತಾರತಮ್ಯ, ಪ್ರತಿಭಟನೆ ಮಹಾನಗರ ಪಾಲಿಕೆಯು ಹಾನಿಗೊಳಾಗದ ಮನೆಗಳ ಸರ್ವೆ ನಡೆಸಿ, ಮಾಹಿತಿ ಪಡೆದುಕೊಂಡು ಪರಿಹಾರ ನೀಡುವುದಾಗಿ ಹೇಳಿತ್ತು. ಅಲ್ಲದೆ ಕಳೆದ ಹದಿನೈದು ದಿನಗಳ ಹಿಂದೆ ಸಿಎಂ ತವರು ಜಿಲ್ಲೆಗೆ ಆಗಮಿಸಿ ತಕ್ಷಣ ಪರಿಹಾರ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದರು. ಅಲ್ಲದೆ ತಕ್ಷಣಕ್ಕೆ 10 ಸಾವಿರ ರೂ. ನೀಡುವುದಾಗಿ ಹೇಳಲಾಗಿತ್ತು. ಭಾಗಶಃ ಹಾನಿಗೊಳಗಾದ ಮನೆಗಳಿಗೆ 1 ಲಕ್ಷ ರೂ. ಪೂರ್ಣವಾಗಿ ಬಿದ್ದ ಮನೆಗಳಿಗೆ 5 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದರು. ಆದ್ರೆ, ಇದುವರೆಗೂ ಪರಿಹಾರ ಲಭ್ಯವಾಗಿಲ್ಲ. ಸಿಎಂ ಯಡಿಯೂರಪ್ಪನವರು ಸುಳ್ಳು ಭರವಸೆಯನ್ನು ನೀಡಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.
ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ರಮೇಶ್ ಹೆಗ್ಡೆ ನೇತೃತ್ವದಲ್ಲಿ ಮಳೆಯ ನಡುವೆಯೂ ಪ್ರತಿಭಟನೆ ನಡೆಸಲಾಯಿತು. ಬಳಿಕ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿಗಳು ಯಾರಿಗೆ ಪರಿಹಾರ ಸಿಕ್ಕಿಲ್ಲ ಅವರ ದಾಖಲಾತಿಗಳನ್ನು ಪರಿಶೀಲನೆ ನಡೆಸಿ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ರು. ಆ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.