ಕರ್ನಾಟಕ

karnataka

ETV Bharat / state

ಶಿವಮೊಗ್ಗ ಜಿಲ್ಲೆಯಲ್ಲಿನ ಐತಿಹಾಸಿಕ 12 ಸ್ಮಾರಕಗಳ ಡಿಜಿಟಲೀಕರಣ: ಇದರಿಂದ ಉಪಯೋಗ ಏನು?

ಈವರೆಗೆ 3ಡಿ ಲೇಸರ್ ತಂತ್ರಜ್ಞಾನದಲ್ಲಿ ವಿಶ್ವವಿಖ್ಯಾತ ತಾಜ್ ಮಹಲ್, ಕೊನಾರ್ಕ್ ನ ಸೂರ್ಯ ದೇವಾಲಯ ಹಾಗೂ ವಾರಣಾಸಿಯ ವಿಶ್ವನಾಥ ದೇವಾಲಯ ಸ್ಕ್ಯಾನಿಂಗ್ ನಡೆಸಲಾಗಿದೆ. ಇದೀಗ ಈಗ ಕರ್ನಾಟಕದ ಎಲ್ಲಾ ಸ್ಮಾರಕಗಳನ್ನು ಹೊಸ ತಂತ್ರಜ್ಞಾನದ ಮೂಲಕ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ.

Digitization of Historical Monuments in Shimoga District
ಶಿವಮೊಗ್ಗ ಜಿಲ್ಲೆಯಲ್ಲಿನ ಐತಿಹಾಸಿಕ ಸ್ಮಾರಕಗಳ ಡಿಜಿಟಲೀಕರಣ

By

Published : Sep 17, 2020, 9:37 PM IST

ಶಿವಮೊಗ್ಗ: ದೇಶದಲ್ಲೇ ಮೊದಲ ಬಾರಿಗೆ ರಾಜ್ಯದ ಪ್ರಮುಖ ಪಾರಂಪರಿಕ ಮತ್ತು ಐತಿಹಾಸಿಕ ಕಟ್ಟಡ, ಸ್ಮಾರಕಗಳ ಡಿಜಿಟಲೀಕರಣ ಕಾರ್ಯ ನಡೆಯುತ್ತಿದ್ದು, ಇದಕ್ಕಾಗಿ 3ಡಿ ಲೇಸರ್ ತಂತ್ರಜ್ಞಾನದ ಮೂಲಕ ಸ್ಮಾರಕಗಳನ್ನು ಸೆರೆಹಿಡಿಯಲಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯಲ್ಲಿನ ಐತಿಹಾಸಿಕ ಸ್ಮಾರಕಗಳ ಡಿಜಿಟಲೀಕರಣ

ಹೌದು, ಈವರೆಗೆ 3ಡಿ ಲೇಸರ್ ತಂತ್ರಜ್ಞಾನದಲ್ಲಿ ವಿಶ್ವವಿಖ್ಯಾತ ತಾಜ್ ಮಹಲ್, ಕೊನಾರ್ಕ್ ನ ಸೂರ್ಯ ದೇವಾಲಯ ಹಾಗೂ ವಾರಣಾಸಿಯ ವಿಶ್ವನಾಥ ದೇವಾಲಯ ಸ್ಕ್ಯಾನಿಂಗ್ ನಡೆಸಲಾಗಿದೆ. ಇದೀಗ ಈಗ ಕರ್ನಾಟಕದ ಎಲ್ಲಾ ಸ್ಮಾರಕಗಳನ್ನು ಹೊಸ ತಂತ್ರಜ್ಞಾನದ ಮೂಲಕ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ.

ಭವಿಷ್ಯದ ದೃಷ್ಟಿಯಿಂದ ಸ್ಮಾರಕಗಳ ಸಂರಕ್ಷಣೆಗೆ ಅನುಕೂಲವಾಗುವಂತೆ 3ಡಿ ಲೇಸರ್ ತಂತ್ರಜ್ಞಾನದಲ್ಲಿ ಕಟ್ಟಡಗಳನ್ನು ಸರ್ವೇ ಮಾಡಲು ರಾಜ್ಯ ಪುರಾತತ್ವ ಇಲಾಖೆ ಮುಂದಾಗಿದ್ದು, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಹಯೋಗದಲ್ಲಿ ಸರ್ವೇ ಕಾರ್ಯ ಆರಂಭಿಸಿದೆ. ರಾಜ್ಯದ 30 ಜಿಲ್ಲೆಗಳನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಲಾಗಿದ್ದು, ಚರ್ಚ್, ದೇವಾಲಯ, ಮಸೀದಿ, ಕೋಟೆ, ಅರಮನೆ ಸೇರಿದಂತೆ ಒಟ್ಟು 844 ಸ್ಮಾರಕಗಳನ್ನು ಮೊದಲಿಗೆ ಸರ್ವೇ ಮಾಡಲಾಗುತ್ತಿದೆ.

ಇನ್ನೂ ಬೆಂಗಳೂರು ವಿಭಾಗದ ಶಿವಮೊಗ್ಗ ಜಿಲ್ಲೆಯಲ್ಲೂ ಕೂಡ 12 ಪಾರಂಪರಿಕ ಕಟ್ಟಡ, ಅರಮನೆ, ಸ್ಮಾರಕಗಳನ್ನು ಗುರುತಿಸಲಾಗಿದ್ದು, ಸರ್ವೇ ಕಾರ್ಯ ಆರಂಭಿಸಲಾಗಿದೆ. ಪ್ರಮುಖವಾಗಿ ಶಿವಮೊಗ್ಗ ನಗರದ ಶಿವಪ್ಪ ನಾಯಕ ಅರಮನೆ, ಕೋಟೆ ಆಂಜನೇಯ ದೇವಾಲಯ, ಶ್ರೀ ಭೀಮೇಶ್ವರ ದೇವಾಲಯ, ಭದ್ರಾವತಿಯ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯ, ಹೊಸನಗರ ತಾಲೂಕಿನ ಸಾಲಗೇರಿಯ ಉಮಾಪತಿ ದೇವಾಲಯ, ಶಿವಪ್ಪ ನಾಯಕನ ಗೋಪುರ, ಶಿಕಾರಿಪುರ-ಚಿಕ್ಕಮಾಗಡಿ ಜೈನ ಬಸದಿ, ನರಸಾಪುರ ಬಸದಿ, ಸೊರಬ ತಾಲೂಕಿನ ಪುರಗ್ರಾಮದ ಸೋಮೇಶ್ವರ ದೇವಾಲಯ ಸಹ ಸೇರಿದೆ.

ಸ್ಮಾರಕಗಳ ಡಿಜಿಟಲೀಕರಣದಿಂದಾಗಿ ಮುಂದಿನ ದಿನಗಳಲ್ಲಿ ಸ್ಮಾರಕಗಳು ಯಾವುದೇ ಕಾರಣದಿಂದ ಹಾನಿಗೊಳಗಾದರೆ, ಕಟ್ಟಡಗಳ ಮರು ನಿರ್ಮಾಣಕ್ಕೆ ಈ ತಂತ್ರಜ್ಞಾನ ಸಹಕಾರಿಯಾಗಲಿದೆ. ಜೊತೆಗೆ ಸ್ಮಾರಕಗಳ ಯಥಾವತ್ತಾದ 3ಡಿ ವರ್ಚುವಲ್ ವೀವ್​ ಅನ್ನು ಸಹ ರಚಿಸಬಹುದಾಗಿದೆ. 3ಡಿ ಸರ್ವೆ ಮಾಡುವಾಗ ಯಾವುದೇ ಸ್ಮಾರಕಗಳ 33 ಅಂಶಗಳನ್ನು ಕ್ರೋಢೀಕರಿಸಲಾಗುತ್ತದೆ. ಪ್ರಮುಖವಾಗಿ ಸ್ಮಾರಕಗಳ ಅಳತೆ, ಆಳ, ಅಗಲ, ಸ್ಮಾರಕಕ್ಕೆ ಬಳಸಲಾಗಿರುವ ಸಾಮಗ್ರಿ, ನಿರ್ಮಾಣಗೊಂಡ ವರ್ಷ, ಯಾರ ಕಾಲದಲ್ಲಿ ನಿರ್ಮಾಣಗೊಂಡಿದೆ, ವರ್ಷ ಮತ್ತು ಐತಿಹಾಸಿಕ ವಿವರಗಳು ಹಾಗೂ ವಾಸ್ತು ಶಿಲ್ಪದ ಶೈಲಿಯನ್ನು ಸಹ ಕ್ರೋಢೀಕರಿಸಿ ಸಂಗ್ರಹಿಸಲಾಗುತ್ತದೆ. ಇದರೊಂದಿಗೆ ಸ್ಪೇಶಿಯಲ್ ತಂತ್ರಜ್ಞಾನವನ್ನು ಅಡಕಗೊಳಿಸಿ, ಸ್ಮಾರಕಗಳ ಜಿಪಿಎಸ್ ಲೊಕೇಶನ್, ಛಾಯಾಚಿತ್ರ ಸಹ ಇರಲಿದ್ದು, ಅವುಗಳ ಮೇಲೆ ಕ್ಲಿಕ್ ಮಾಡಿದಾಗ ಹತ್ತಿರದ ಊರು, ತಲುಪುವ ವ್ಯವಸ್ಥೆ ಮುಂತಾದ ವಿವರಗಳು ಸಹ ಲಭ್ಯವಾಗಲಿದೆ.

3ಡಿ ಲೇಸರ್ ತಂತ್ರಜ್ಞಾನದ ಮೂಲಕ ರಾಜ್ಯದ ಪಾರಂಪರಿಕ, ಐತಿಹಾಸಿಕ ಕಟ್ಟಡ ಮತ್ತು ಸ್ಮಾರಕಗಳ ಡಿಜಿಟಲೀಕರಣ ಕಾರ್ಯವನ್ನು ಇದೀಗ ಪ್ರಾರಂಭಿಸಿದ್ದು, ಆ ಮೂಲಕ ಪಾರಂಪರಿಕ ಮತ್ತು ಐತಿಹಾಸಿಕ ಕಟ್ಟಡ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವ ರಾಜ್ಯ ಪುರಾತತ್ವ ಇಲಾಖೆಯ ಕಾರ್ಯ ನಿಜಕ್ಕೂ ಶ್ಲಾಘನೀಯ.

ABOUT THE AUTHOR

...view details