ಶಿವಮೊಗ್ಗ: ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಮತ್ತೆ ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೇರಿದಂತೆ ಆಡಳಿತ ಪಕ್ಷದ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತವರ ಮಗನನ್ನು ಬಂಧಿಸಿ ಜೈಲಿಗಟ್ಟಿದೆ. ಸದಸ್ಯ ಮಾಡಾಳ್ ವಿರುಪಾಕ್ಷಪ್ಪ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಮಧ್ಯೆ ಶಿವಮೊಗ್ಗ ಲೋಕಾಯುಕ್ತ ಅಧೀಕ್ಷಕರ ಹೆಸರಿನಲ್ಲಿ ನಕಲಿ ಕರೆ ಮಾಡಿರುವ ವಂಚಕನೊಬ್ಬ ಭದ್ರಾವತಿಯ ಸಿಡಿಪಿಓ ಅಧಿಕಾರಿಗೆ ಹಣ ನೀಡುವಂತೆ ಬೆದರಿಕೆ ಹಾಕಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿಯ ಸಿಡಿಪಿಒ ಆಗಿ ಕಾರ್ಯನಿರ್ವಹಿಸುತ್ತಿರುವ ಸುರೇಶ್ ಎಂಬುವವರಿಗೆ ನಾನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ನೀವು ಅಂಗನವಾಡಿಗೆ ಆಹಾರ ಪದಾರ್ಥ ಪೂರೈಕೆಯಲ್ಲಿ ಅವ್ಯವಹಾರ ಮಾಡಿದ್ದೀರಿ ಎಂದು ದೂರು ಬಂದಿದೆ. ನಿಮ್ಮನ್ನು ವಿಚಾರಣೆ ನಡೆಸಬೇಕಿದೆ. ನಾನು ನಿಮ್ಮ ಡೈರೆಕ್ಟರ್ಗೆ ಫೋನ್ ಮಾಡಿದ್ದೆ ಎಂದು ಹೇಳಿ ವಂಚಕ ಬೆದರಿಸಿದ್ದಾನೆ.
ತಹಶೀಲ್ದಾರ್, ಶಾಸಕರ ಪಿಎಗೂ ನಕಲಿ ಲೋಕಾಯುಕ್ತ ಕರೆ:ಸಿಡಿಪಿಓ ಸುರೇಶ್ ರವರಿಗೆ ಫೋನ್ ಮಾಡುವ ಮೊದಲು, ನಕಲಿ ಲೋಕಾಯುಕ್ತ ಅಧಿಕಾರಿ ಭದ್ರಾವತಿ ತಹಶೀಲ್ದಾರ್ ಹಾಗೂ ಶಾಸಕ ಸಂಗಮೇಶ್ ರವರ ಪಿಎಗೆ ಫೋನ್ ಮಾಡಿ ಸುರೇಶ್ ರವರ ವಿರುದ್ಧ ಅವ್ಯವಹಾರದ ದೂರು ಬಂದಿದೆ. ಅವರಿಗೆ ತಕ್ಷಣ ನನ್ನ ನಂಬರ್ಗೆ ಕರೆ ಮಾಡುವಂತೆ ತಿಳಿಸಿದ್ದಾನೆ.
ಇದು ನಿಜವೇ ಇರಬಹುದು ಎಂದು ಭಾವಿಸಿದ ತಹಶೀಲ್ದಾರ್ ಹಾಗೂ ಶಾಸಕರ ಪಿಎ, ಸುರೇಶ್ಗೆ ಕರೆ ಮಾಡುವಂತೆ ತಿಳಿಸಿದ್ದಾರೆ. ಮತ್ತೆ ಸಿಡಿಪಿಓಗೆ ಕರೆ ಮಾಡಿರುವ ನಕಲಿ ಲೋಕಾಯುಕ್ತ ನೀವು ಚುನಾವಣಾ ಕರ್ತವ್ಯದಲ್ಲಿದ್ದೀರಿ, ಈಗ ನೀತಿ ಸಂಹಿತೆ ಇರುವುದರಿಂದ ಅಡ್ವೋಕೇಟ್ ಜನರಲ್ ಬಂದಿದ್ದಾರೆ. ನಿಮಗೆ ತೂಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ನಾವು 10 ಅಂಗನವಾಡಿಗೆ ಭೇಟಿ ನೀಡಿ ವರದಿ ತಂದಿದ್ದೇವೆ. ನಿಮ್ಮ ಬಗ್ಗೆ ವಿಚಾರಿಸಿದ್ದೇವೆ. ನೀವು ಒಳ್ಳೆಯವರಿದ್ದೀರಿ, ನಿಮಗೆ ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾನೆ.
ನಂತರ ನಿಮ್ಮ ವಿಚಾರಣೆ ನಡೆಸಲು ಬೆಂಗಳೂರಿನಿಂದ ಇಬ್ಬರು ಅಧಿಕಾರಿಗಳು ಬರುತ್ತಿದ್ದಾರೆ. ಅವರಿಗೆ 60 ಸಾವಿರ ರೂಪಾಯಿಯನ್ನು ಆನ್ಲೈನ್ ಪಾವತಿ ಮಾಡುವಂತೆ ತಿಳಿಸಿ ಫೋನ್ ನಂಬರ್ವೊಂದನ್ನು ನೀಡಿದ್ದಾನೆ. ಇನ್ನು ಇಷ್ಟಕ್ಕೆ ಸುಮ್ಮನಿರದ ವಂಚಕ ನಿಮ್ಮ ಮೇಲೆ ಸಿ ರಿಪೋರ್ಟ್ ಹಾಕುತ್ತೇವೆ ಎಂದು ಪದೇ ಪದೆ ಬೆದರಿಕೆ ಕರೆ ಮಾಡಿದ್ದಾನೆ. ಇದರಿಂದ ಅನುಮಾನಗೊಂಡ ಸಿಡಿಪಿಒ ಸುರೇಶ್ ಅವರು ಶಿವಮೊಗ್ಗ ಲೋಕಾಯುಕ್ತ ಡಿವೈಎಸ್ಪಿಗೆ ನೇರವಾಗಿ ಕರೆ ಮಾಡಿ ವಿಚಾರಿಸಿದಾಗ, ನಕಲಿ ಲೋಕಾಯುಕ್ತ ಡಿವೈಎಸ್ಪಿಯ ಬಣ್ಣ ಬಯಲಾಗಿದೆ.
ನಂತರ ಸುರೇಶ್ ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣೆಯಲ್ಲಿ ತಮಗೆ ವಂಚಕನೊಬ್ಬ ಲೋಕಾಯುಕ್ತ ಹೆಸರಿನಲ್ಲಿ ನಕಲಿ ಕರೆ ಮಾಡಿ, ಹಣಕ್ಕೆ ಬೇಡಿಕೆ ಇಟ್ಟು, ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಲಕ್ಷಾಂತರ ಮೌಲ್ಯದ ಚಿನ್ನ ಕದ್ದು ಗುಜರಿಗೆ ಹಾಕಿದ ಖದೀಮ!