ಶಿವಮೊಗ್ಗ:ವಾಹನ ಡಿಕ್ಕಿ ಹೊಡೆದು ನಡುರಸ್ತೆಯಲ್ಲೇ ಕರುವೊಂದು ಪ್ರಾಣ ಬಿಟ್ಟಿದೆ. ತಾಯಿ ಹಸು ಮೃತಪಟ್ಟ ತನ್ನ ಕರುವಿನ ಬಳಿ ನಿಂತು ಕಣ್ಣೀರು ಹಾಕುತ್ತಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಸೊರಬ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಚಾಮರಾಜಪೇಟೆ ಬಡಾವಣೆಯಲ್ಲಿ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಐದು ದಿನದ ಕರು ಮೃತಪಟ್ಟಿದೆ. ಹಸು ಮತ್ತು ಕರು ರಸ್ತೆಯಲ್ಲಿ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಸ್ಥಳೀಯರು ಕರುವನ್ನು ಬದುಕಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ಮೃತ ಕರುವನ್ನು ಎಬ್ಬಿಸಲು ಹಸು ಪ್ರಯತ್ನಿಸುತ್ತಿರುವ ದೃಶ್ಯ ಎಂಥವರ ಹೃದಯವನ್ನೂ ಕಲಕುತ್ತದೆ.
ಈ ವೇಳೆ ಅಲ್ಲಿಗೆ ಬಂದ ಇನ್ನೊಂದು ಆಕಳು ಸಹ ಕರುವನ್ನು ಏಳಿಸಲು ಯತ್ನಿಸಿದ್ದು ನೋಡಿದ್ರೆ, ಯಾರಿಗಾದರೂ ಕರುಳು ಚುರುಕ್ ಅನ್ನದೆ ಇರದು. ಕರುವಿನ ಅಂತ್ಯಕ್ರಿಯೆ ಮುಗಿಯುವವರೆಗೂ ತಾಯಿ ಹಸು ಜಾಗ ಬಿಟ್ಟು ಕದಲಲಿಲ್ಲ. ಸ್ಥಳೀಯ ಬಜರಂಗದಳ ಕಾರ್ಯಕರ್ತರು ಕರುವಿನ ಅಂತ್ಯಕ್ರಿಯೆಗೆ ಸಹಕರಿಸಿದರು.