ಶಿವಮೊಗ್ಗ:ಛತ್ರವತಿ ಶಿವಾಜಿ ಮಹಾರಾಜರ ಮಗ ರಾಜಾರಾಮನು ಮೊಗಲರನ್ನು ಎದುರಿಸಲು ಯತ್ನಿಸಿದಾಗ ಔರಂಗಜೇಬನು ತನ್ನ ದೊಡ್ಡ ಸೈನ್ಯವನ್ನು ದಾಳಿಗೆ ಕಳುಹಿಸುತ್ತಾನೆ. ಈ ಸಂದರ್ಭದಲ್ಲಿ ರಾಜಾರಾಮನು ಕೆಳದಿ ಸಂಸ್ಥಾನದಲ್ಲಿ ಆಶ್ರಯ ಪಡೆಯುತ್ತಾನೆ. ಆಗ ಕರುಣಾಮಯಿಯಾದ ಕೆಳದಿ ರಾಣಿ ಚೆನ್ನಮ್ಮಾಜೀ ರಾಜಾರಾಮನಿಗೆ ಅಭಯ ನೀಡಿ ಯುದ್ಧ ಮಾಡಿ ಮೊಘಲ್ ದೊರೆ ಔರಂಗಜೇಬನ ಬಲಾಢ್ಯ ಸೈನ್ಯವನ್ನು ಸೋಲಿಸಿ ಪರಾಕ್ರಮ ಮೆರೆಯುತ್ತಾಳೆ. ಇಂತಹ ವೀರ ನಾರಿ ಕೆಳದಿ ಚೆನ್ನಮ್ಮಾಜೀ ಎಂದು ಸಂಸದರಾದ ಬಿ ವೈ ರಾಘವೇಂದ್ರ ಹೇಳಿದ್ದಾರೆ.
ವೀರ ನಾರಿ ಕೆಳದಿ ಚೆನ್ನಮ್ಮಾಜೀ ಹೊಗಳಿದ ಸಂಸದ ಬಿ ವೈ ರಾಘವೇಂದ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಈಸೂರು ಗ್ರಾಮದಲ್ಲಿ 'ಅಮೃತ ಭಾರತಿಗೆ ಕನ್ನಡದಾರತಿ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 'ಏಸೂರು ಕೊಟ್ಟರು ಈಸೂರು ಕೊಡೆವು' ಎಂಬ ಘೋಷಣೆಯ ಮೂಲಕ ಸ್ವಾತಂತ್ರ್ಯ ಪೂರ್ವದಲ್ಲೇ ಸ್ವಾತಂತ್ರ್ಯ ಗ್ರಾಮ ಎಂದು ಘೋಷಿಸಿಕೊಂಡ ನಮ್ಮ ಈಸೂರಿನಲ್ಲಿ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮ ನಡೆಯುತ್ತಿರುವುದು ನಮ್ಮ ಊರಿನ ಹಿರಿಮೆಯನ್ನು ಎಲ್ಲೆಡೆ ಸಾರುತ್ತಿದೆ ಎಂದರು.
1942ರ ಸಪ್ಟೆಂಬರ್ ತಿಂಗಳ 25ರಂದು ಬ್ರಿಟಿಷರಿಂದ ಸ್ವಾತಂತ್ರ್ಯ ಘೋಷಣೆ, ಕೊನೆಗೆ ಈ ಹೋರಾಟ ಸಂಘಟಿಸಿ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿ ಸುಮಾರು ಒಂದು ವರ್ಷದ ಬಳಿಕ ಭಾರತ ಮಾತಾಕಿ ಜೈ ಎನ್ನುತ್ತಾ ನೇಣು ಹಗ್ಗಕ್ಕೆ ಕೊರಳು ಕೊಟ್ಟ ಗುರಪ್ಪ, ಜೀನಳ್ಳಿ ಮಲ್ಲಪ್ಪ, ಸೂರ್ಯನಾರಾಯಣಾಚಾರ್, ಬಡಕಳ್ಳಿ ಹಾಲಪ್ಪ ಹಾಗೂ ಗೌಡ್ರು ಶಂಕರಪ್ಪ ಅವರ ಸ್ಮರಣೆಯೇ ನಮ್ಮಲ್ಲಿ ದೇಶಭಕ್ತಿಯ ಭಾವ ಹುಟ್ಟಿಸುತ್ತದೆ ಎಂದರು.
ಅಂದು ಈಸೂರು ಗ್ರಾಮದ ಜನತೆ "ಈಸೂರು ಸ್ವಾತಂತ್ರ್ಯ ಗ್ರಾಮ. ಬ್ರಿಟಿಷರಿಗೆ ಪ್ರವೇಶವಿಲ್ಲ'' ಎಂಬ ನಾಮ ಫಲಕವನ್ನು ಊರ ಪ್ರವೇಶದ್ವಾರಕ್ಕೆ ಹಾಕಿದ್ದರು ಎಂದು ಹೇಳಿದ್ದರು. ಈ ಕಾರ್ಯಕ್ರಮ ಈಸೂರು ಹಾಗೂ ಹೊಸನಗರ ತಾಲೂಕಿನ ನಗರದ ಕೋಟೆಯಲ್ಲಿ ಜರುಗಿತು. ಈ ವೇಳೆ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ. ಎಸ್ ಗುರುಮೂರ್ತಿ, ಸಾಮಾಜಿಕ ಚಿಂತಕರಾದ ಪ್ರಕಾಶ್ ಮಲ್ಪೆ, ಜಿಲ್ಲಾಪಂಚಾಯತ್ CEO ವೈಶಾಲಿ, ತಹಶೀಲ್ದಾರ್ ಕವಿರಾಜ್, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಚೆನ್ನವೀರಪ್ಪ,ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಓದಿ :ಮಂಡ್ಯದಲ್ಲಿ ಸಚಿವ ಅಶ್ವತ್ಥ್ ನಾರಾಯಣ, ಬಿಜೆಪಿ ಎಂಎಲ್ಸಿ ಅಭ್ಯರ್ಥಿ ರವಿಶಂಕರ್ ವಿರುದ್ಧ ಎಫ್‌ಐಆರ್