ಶಿವಮೊಗ್ಗ:ಬಿಜೆಪಿಯ ಮುಖಂಡನೋರ್ವ ಫೋನ್‌ನಲ್ಲಿ ಅರಣ್ಯ ಇಲಾಖೆಯ ಆರ್‌ಎಫ್‌ಒಗೆ ಆವಾಜ್ ಹಾಕಿರುವ ಆಡಿಯೋ ಸದ್ಯ ಶಿವಮೊಗ್ಗದಾದ್ಯಂತ ವೈರಲ್ ಆಗಿದ್ದು, ನಿನ್ನೆ ಸಕ್ರೆಬೈಲಿನ ವನ್ಯಜೀವಿ ಸಪ್ತಾಹದಲ್ಲಿಯೂ ಸಹ ಸಂಸದರ ಮುಂದೆಯೇ ಅಧಿಕಾರಿಗಳಿಗೆ ಆವಾಜ್ ಹಾಕಿದ್ದಾರೆ.
ಶಿವಮೊಗ್ಗ ತಾಲೂಕು ಗಾಜನೂರು ಗ್ರಾಮದ ಬಿಜೆಪಿ ಮುಖಂಡ ಗಿರಿರಾಜ್, ಶಂಕರ ವಲಯ ಅರಣ್ಯದ ಆರ್‌ಎಫ್‌ಒ ಜಯೇಶ್ ಅವರಿಗೆ ಫೋನ್ ಮಾಡಿ ಆವಾಜ್ ಹಾಕಿದ್ದಾರೆ. ಗಿರಿರಾಜ್ ಜಯೇಶ್‌ಗೆ ಆವಾಜ್ ಹಾಕಿರುವ ಮೊಬೈಲ್ ಆಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದೆ. ಗಾಜನೂರು ಗ್ರಾಮದ ಸಮುದಾಯ ಭವನದ ಬಳಿ ಮಾವಿನಮರದ ಒಂದು ಭಾಗ ಸಮುದಾಯ ಭವನದ ಮೇಲೆ ಬೀಳುವಂತೆ ಆಗಿತ್ತು. ಬೀಳುವಂತಿರುವ ಮರವನ್ನು ಕಟ್ ಮಾಡಲು ಅವಕಾಶ ಮಾಡಿ ಕೊಡುವಂತೆ ಗ್ರಾಮದ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿ ಎರಡು ವರ್ಷ ಆಗಿತ್ತು. ಆದರೆ, ಅರಣ್ಯ ಇಲಾಖೆ ಮರ ಕಟಾವಿಗೆ ಅನುಮತಿ ನೀಡಿರಲಿಲ್ಲ. ಕಳೆದ ತಿಂಗಳು ಗಣಪತಿ ಪೆಂಡಲ್ ಹಾಕುವಾಗ ಮರ ಬೀಳುತ್ತದೆ ಎಂದು ಮರವನ್ನು ಸ್ಥಳೀಯರು ಕಟಾವ್ ಮಾಡಿದ್ದಾರೆ. ಈ ಮರ ತುಂಗಾ ಮೇಲ್ದಂಡೆ ಯೋಜನೆಯ ಎಇಇ ರವರ ಕಚೇರಿ ಬಳಿ ಇದ್ದು, ಅರಣ್ಯ ಇಲಾಖೆ ಅನುಮತಿ ನೀಡದೆ ಇದ್ದರೂ ಸಹ ಮರವನ್ನು ಕಟ್ ಮಾಡಿದ್ದ ಕಾರಣ ಇವರ ವಿರುದ್ದ ಕೇಸು ದಾಖಲು ಮಾಡಲಾಗಿತ್ತು.