ಶಿವಮೊಗ್ಗ : ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ನಿರ್ನಾಮ ಮಾಡಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೊಂಡಿದ್ದಾವೆ. ಲೋಕಸಭಾ ಚುನಾವಣಾ ದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿಯ ಹಿರಿಯ ಮುಖಂಡ, ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ನಗರದಲ್ಲಿಂದು ಮಾಧ್ಯದವರೊಂದಿಗೆ ಮಾತನಾಡಿದ ಅವರು, " ಕಾಂಗ್ರೆಸ್ ಬೇಡ ಅಂತ ಇಡೀ ದೇಶದ ಜನ ತೀರ್ಮಾನ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿಸುವ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಲೋಕಸಭಾ ಚುನಾವಣೆ ಅಂದ್ರೆ ಗ್ರಾ.ಪಂ ಮತ್ತು ತಾ.ಪಂ ಚುನಾವಣೆಯಲ್ಲ. ಇದು ದೇಶವನ್ನು ಉಳಿಸುವ ಚುನಾವಣೆಯಾಗಿದೆ. ದೇಶವನ್ನು ಉಳಿಸುವ ಸಲುವಾಗಿ ಈ ಬಾರಿ ಬಿಜೆಪಿ, ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸುತ್ತಿವೆ" ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಮಾತ್ರ ಪಡೆದಿತ್ತು. ಈ ಬಾರಿ ಒಂದು ಸ್ಥಾನ ಸಹ ಕಾಂಗ್ರೆಸ್ಗೆ ಬರಬಾರದು ಅಂತಾ ಬಿಜೆಪಿ, ಜೆಡಿಎಸ್ ಒಂದಾಗಿದ್ದೇವೆ. ರಾಜ್ಯದಲ್ಲಿ 28 ಕ್ಕೆ 28 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ. ಆದರೆ, ಮಾಧ್ಯಮದಲ್ಲಿ ಈ ಬಾರಿ ಬಿಜೆಪಿ 23 ಅಥವಾ 24 ಸ್ಥಾನ ಗೆಲ್ಲಬಹುದು ಎಂದು ತೋರಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ಗೆ ಒಂದು ಸ್ಥಾನವೂ ಸಿಗಬಾರದು. ಬಿಜೆಪಿ, ಜೆಡಿಎಸ್ ಒಂದಾಗಿದ್ದಕ್ಕೆ ಮತದಾರರು ಸಂತೋಷಪಟ್ಟಿದ್ದಾರೆ. ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿ ಮಾಡಲು ಈ 2 ಪಕ್ಷಗಳು ಒಂದಾಗಿವೆ. ಕಳೆದ ಬಾರಿ ಸಿದ್ದರಾಮಯ್ಯ ಬಿಜೆಪಿ ಒಂದು ಸ್ಥಾನ ಪಡೆಯಲ್ಲ ಅಂದಿದ್ದರು. ಆ ವೇಳೆ ಸಿದ್ದರಾಮಯ್ಯ ಸೋತರು, ಬಿಜೆಪಿ ಹೆಚ್ಚು ಸ್ಥಾನ ಪಡೆಯಿತು. ಕಾಂಗ್ರೆಸ್ ಯಾವಾಗಲೂ ವ್ಯತಿರಿಕ್ತವಾದ ಚಿಂತನೆ ಮಾಡುತ್ತದೆ. ನಾವು ದೇಶಕ್ಕೆ ಏನು ಅನುಕೂಲ ಆಗುತ್ತದೆ ಎಂದು ಚಿಂತನೆ ಮಾಡುತ್ತೇವೆ. ಕಾಂಗ್ರೆಸ್ ದೇಶವನ್ನು ನಾಶ ಮಾಡಿದೆ. 9 ವರ್ಷದಲ್ಲಿ ಮೋದಿ ದೇಶವನ್ನು ಅಭಿವೃದ್ಧಿ ಮಾಡಿರುವುದನ್ನು ಜನತೆ ನೋಡಿದ್ದಾರೆ. ಇದಕ್ಕೆ ಚುನಾವಣೆ ನಂತರ ಉತ್ತರ ಸಿಗುತ್ತದೆ ಎಂದರು.
ಸುಕುಮಾರಶೆಟ್ಟಿ ಕಾಂಗ್ರೆಸ್ ಸೇರ್ಪಡೆ : ಸುಕುಮಾರಶೆಟ್ಟಿ ಬಿಜೆಪಿ ಬಿಟ್ಟ ಕಾರಣ ತಿಳಿಸಲಿ ಎಂದು ಸವಾಲು ಹಾಕಿದರು. ಅವರಿಗೆ ಸೀಟ್ ಸಿಗದ ಕಾರಣ ಪಕ್ಷ ಬಿಟ್ಟಿದ್ದಾರೆ ಅಷ್ಟೇ. ಬಿಜೆಪಿಯಲ್ಲಿ ಒಂದು ಕೋಟಿಗೂ ಅಧಿಕ ಸದಸ್ಯರಿದ್ದಾರೆ, ಎಲ್ಲರಿಗೂ ಸೀಟ್ ಕೊಡಲು ಆಗಲ್ಲ. ಸುಕುಮಾರಶೆಟ್ಟಿ ಒಂದು ಬಾರಿ ಎಂಎಲ್ ಎ ಆಗಿದ್ದಾರೆ. ಎಂಎಲ್ಎ ಆಗದಿರುವ ಸಾಕಷ್ಟು ಕಾರ್ಯಕರ್ತರಿದ್ದಾರೆ. ಎಲ್ಲಾ ಅಧಿಕಾರ ತಮಗೆ ಬೇಕು ಎನ್ನುವುದು ತಪ್ಪು ಅಂದರು.