ಶಿವಮೊಗ್ಗ : ಜಿಲ್ಲೆಯು 1980 ರಿಂದ ಬಿಜೆಪಿಯ ಕೋಟೆಯಾಗಿ ರೂಪುಗೊಂಡಿದೆ. ಹಿಂದುತ್ವದ ಅಲೆಯಿಂದ ಇಲ್ಲಿ ಪ್ರಾಬಲ್ಯ ಹೆಚ್ಚಿದ್ದು, ಬಿಜೆಪಿಯ ಶಕ್ತಿ ಕೇಂದ್ರ ಎಂದು ಕರೆದರೆ ತಪ್ಪಾಗಲಾರದು. ಇದುವರೆಗೆ ಜಿಲ್ಲೆಯು ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದೆ. ಇದರಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರು. ಜೊತೆಗೆ, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿ ಜಿಲ್ಲೆಯಿಂದ ಈವರೆಗೆ ಮೂವರು ಕಾರ್ಯನಿರ್ವಹಿಸಿದ್ದಾರೆ.
ಬಿ ಎಸ್ ಯಡಿಯೂರಪ್ಪ 1988 ಹಾಗೂ 1998 ರಲ್ಲಿ ರಾಜ್ಯಾಧ್ಯಕ್ಷರಾಗಿದ್ದರು. ಕೆ ಎಸ್ ಈಶ್ವರಪ್ಪ 1992 ರಲ್ಲಿ ಹಾಗೂ 2010 ರಲ್ಲಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ಅವರನ್ನು ಕೇಂದ್ರ ಬಿಜೆಪಿ ನಾಯಕರುಗಳು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಇದರಿಂದ ಜಿಲ್ಲೆಗೆ ಮೂರನೇ ರಾಜ್ಯಾಧ್ಯಕ್ಷರ ನೇಮಕವಾದಂತೆ ಆಗಿದೆ. ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆ ಬರಲಿದ್ದು, ವಿಜಯೇಂದ್ರ ಅವರ ನಾಯಕತ್ವಕ್ಕೆ ಹೊಸ ಸವಾಲು ಆಗಲಿದೆ.
ಬಿ ವೈ ವಿಜಯೇಂದ್ರ ಮೂರು ವರ್ಷಗಳ ಹಿಂದೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನಕ್ಕೆ ಏರಿದ್ದರು. ನಂತರ ಅವರು ತುಮಕೂರು ಜಿಲ್ಲೆಯ ಶಿರಾ ಹಾಗೂ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಪಕ್ಷದಿಂದ ಉಸ್ತುವಾರಿ ವಹಿಸಿಕೊಂಡು ತಮ್ಮ ಸಂಘಟನಾ ಸಾಮರ್ಥ್ಯ ಪ್ರದರ್ಶಿಸಿದ್ದರು. ಅದು ಜೆಡಿಎಸ್, ಕಾಂಗ್ರೆಸ್ನ ಭದ್ರಕೋಟೆಯಲ್ಲಿ ಅವರು ಕಮಲ ಅರಳಿಸುವಲ್ಲಿ ಯಶಸ್ವಿಯಾಗಿದ್ದರು.
ಇದನ್ನೂ ಓದಿ :ವಿಜಯೇಂದ್ರ ಕರ್ನಾಟಕ ಬಿಜೆಪಿಯ ನೂತನ ಸಾರಥಿ: ಮೋದಿ, ಶಾ, ಸಂತೋಷ್ಗೆ ಧನ್ಯವಾದ ಹೇಳಿದ BYV