ಶಿವಮೊಗ್ಗ: ಭಾರತೀಯ ಸಂಸ್ಕೃತಿಯಲ್ಲಿ ಭೂಮಿ ತಾಯಿಗೆ ವಿಶೇಷ ಸ್ಥಾನವನ್ನು ನೀಡಿದ್ದೇವೆ. ಭೂಮಿ ತಾಯಿಯನ್ನು ಸಹನಮೂರ್ತಿ ಎಂದು ಕರೆಯುತ್ತೇವೆ. ಭೂಮಿಯನ್ನು ಸೀಳಿ ಉಳುಮೆ ಮಾಡಿದರೂ ಇಂತಿಷ್ಟು ಬೇಸರಗೊಳ್ಳದೆ, ನಮಗೆ ಬೇಕಾದ ಸಮೃದ್ಧ ಫಸಲು ಅದು ನೀಡುತ್ತದೆ. ಹಾಗಾಗಿ ಭೂಮಿ ಹುಣ್ಣಿಮೆಯಂದು ಭೂಮಿ ತಾಯಿಗೆ ಪೂಜೆ ನಡೆಸುವ ಮೂಲಕ ತಮ್ಮ ನಮನವನ್ನು ಸಲ್ಲಿಸಲಾಗುತ್ತದೆ. ಮಲೆನಾಡಿನಲ್ಲಿಯೂ ಭೂಮಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಭೂಮಿ ಹುಣ್ಣಿಮೆ ಆಚರಣೆ: ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆ ಎಂದು ಕರೆದರೆ, ಉತ್ತರ ಕರ್ನಾಟಕದಲ್ಲಿ ಸೀಗೆ ಹುಣ್ಣಿಮೆ ಎಂದು ಕರೆಯುತ್ತಾರೆ. ಇದು ಭತ್ತ ಸೇರಿದಂತೆ ಎಲ್ಲಾ ಪೈರುಗಳು ಈಗ ತೆನೆ ಬಿಡುವ ಸಮಯ. ಇದನ್ನು ಭೂಮಿ ತಾಯಿ ಗರ್ಭಿಣಿಯಾಗಿರುವ ಸಂಕೇತ ಎಂದು ಭಾವಿಸಲಾಗುತ್ತದೆ. ಹಚ್ಚ ಹಸಿರಿನ ಮಡಿಲಿನಲ್ಲಿ ಫಸಲನ್ನು ಹೊತ್ತು ಗರ್ಭಿಣಿಯಾದ ಭೂತಾಯಿಗೆ ಸೀಮಂತ ಮಾಡುವ ಹಬ್ಬವೇ "ಭೂಮಿ ಹುಣ್ಣಿಮೆ ಎಂದು ಗ್ರಾಮ್ಯ ಭಾಷೆಯಲ್ಲಿ ಕರೆಯುತ್ತಾರೆ. ಇದು ಭೂಮಿ ಮತ್ತು ರೈತರಿಗೆ ನಡುವಿನ ಸಂಬಂಧವನ್ನು ಬಿಂಬಿಸುವ ಹಬ್ಬವಾಗಿದೆ.
ಭೂಮಿ ಹುಣ್ಣಿಮೆ ವಿಶೇಷ ಭೂಮಣ್ಣಿ ಬುಟ್ಟಿ : ಭೂಮಿ ಹುಣ್ಣಿಮೆ ಹಬ್ಬದಲ್ಲಿ ಭೂಮಣ್ಣಿ ಬುಟ್ಟಿಗೆ ವಿಶೇಷ ಸ್ಥಾನವಿದೆ. ದೊಡ್ಡ ಬುಟ್ಟಿ ಭೂಮಣ್ಣಿ ಬುಟ್ಟಿ ಹಾಗೂ ಚಿಕ್ಕ ಬುಟ್ಟಿ ಅಚ್ಚಂಬಲಿ ಬುಟ್ಟಿ ಎಂಬ ಎರಡು ಬಿದಿರಿನ ಬುಟ್ಟಿಗಳಿವೆ. ನವರಾತ್ರಿಯ ವಿಜಯ ದಶಮಿ ಹಬ್ಬದಂದು ಈ ಬುಟ್ಟಿಗೆ ಸಗಣಿ ಕೆಮ್ಮಣ್ಣು ಬಳಿದು ಪೂಜಿಸಿ ನಂತರ ಅಕ್ಕಿ ಹಿಟ್ಟಿನಿಂದ ಬಣ್ಣ ತಯಾರು ಮಾಡಿ ಬುಟ್ಟಿಗಳ ಮೇಲೆ ಚಿತ್ರ ಬರೆಯುತ್ತಾರೆ. ಈ ಚಿತ್ತಾರ ಕಲೆಯಲ್ಲಿ ಮಲೆನಾಡಿನ ಸುಂದರ ಬದುಕನ್ನು ಬಿಂಬಿಸುವ ಚಿತ್ರಗಳಿರುತ್ತವೆ. ಇದರಲ್ಲಿ ಹೂವಿನ ಸಾಲು, ಗಡಿಗೆ, ಬಸವನ ಪಾದ, ಆರತಿ ಚಿತ್ತಾರ, ಭತ್ತದ ಸಸಿ, ತೆಂಗಿನ ಮರ, ಅಡಿಕೆ ಮರ, ಪಶು ಪಕ್ಷಿ, ಸೂರ್ಯ, ಚಂದ್ರ, ಉಳುಮೆಯ ಸಾಮಗ್ರಿಯನ್ನು ಚಿತ್ತರಾಗಿತ್ತಿಯರು ಸೆಣಬು ನಾರಿನಿಂದ ಚಿತ್ರಿಸುತ್ತಾರೆ.
ಹಬ್ಬದ ಹಿಂದಿನ ದಿನ ಮನೆಯ ಎಲ್ಲಾ ಮಹಿಳೆಯರು ಸೇರಿ ಮನೆಯ ಹಿತ್ತಲು ಗದ್ದೆ ತೋಟಗಳಲ್ಲಿ ಬೆಳೆದ ಬಗೆ ಬಗೆಯ ಹತ್ತು ಹಲವು ಸೊಪ್ಪು ತರಕಾರಿಗಳನ್ನು ಕೊಯ್ದು ಮನೆಗೆ ತರುತ್ತಾರೆ. ಗಂಡಸರು ಹಬ್ಬದ ದಿನ ತಮ್ಮ ತಮ್ಮ ಗದ್ದೆಯಲ್ಲಿ ಪೂಜೆ ಮಾಡುವ ಜಾಗವನ್ನು ಸ್ವಚ್ಚಗೊಳಿಸಿ ಚಪ್ಪರ ಹಾಕಿ ಬಾಳೆಗಿಡ, ಮಾವಿನ ತೋರಣ ಚೆಂಡು ಹೂವಿನ ಹಾರ ಕಟ್ಟಿ ಸಿಂಗರಿಸುತ್ತಾರೆ. ಬಳಿಕ ಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗುತ್ತದೆ.
ಹಬ್ಬದ ದಿನ ಭಕ್ಷ್ಯ ಭೋಜನ ತಯಾರಿ: ಮಹಿಳೆಯರು ಮನೆಯನ್ನು ಸ್ವಚ್ಛಗೊಳಿಸಿ, ಹಬ್ಬದ ಅಡುಗೆ ಮಾಡುತ್ತಾರೆ. ಎಲ್ಲಾ ಬಗೆಯ ಸೊಪ್ಪು ತರಕಾರಿಗಳನ್ನು ಒಳಗೊಂಡ ಅಚ್ಚಂಬಲಿ ತಯಾರಿಸುತ್ತಾರೆ. ಇದರಲ್ಲಿ ಅಮಟೆಕಾಯಿ ಪಲ್ಯ, ಕೊಟ್ಟೆ ಕಡಬು, ಸೌತೆ ಕಾಯಿ ಕಡಬು, ಕೆಸವಿನದಂಟಿನ ಕಡಬು, ಏಳು ಬಗೆಯ ಪಲ್ಯ, ಪಚಡಿ, ಪಾಯಸ, ಬುತ್ತಿ ಉಂಡೆ, ಹೋಳಿಗೆ, ಅತಿರಸ, ಕರ್ಜಿಕಾಯಿ, ಹೀಗೆ ಹಲವಾರು ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ.