ಶಿವಮೊಗ್ಗ:ಶಿಕಾರಿಪುರ ಕ್ಷೇತ್ರದ ಶಾಸಕಬಿ ವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದು ದೊಡ್ಡ ಜವಾಬ್ದಾರಿ ಹಾಗೂ ಇದೊಂದು ಯೋಗ ಎಂದು ಅವರ ಸಹೋದರ ಹಾಗೂ ಸಂಸದ ಬಿ ವೈ ರಾಘವೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರನ್ನು ಕೇಂದ್ರಿಯ ಪಕ್ಷದ ಹಿರಿಯರು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಇದು ಅತ್ಯಂತ ಸಂತೋಷದ ವಿಚಾರವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಿಯ ಅಧ್ಯಕ್ಷ ನಡ್ಡಾ ಅವರು ವಿಜಯೇಂದ್ರರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಎಂದರು.
ಯಡಿಯೂರಪ್ಪ ಅವರ ರಾಜಕಾರಣವನ್ನು ಹತ್ತಿರದಿಂದ ನೋಡಿ ವಿಜಯೇಂದ್ರ ಬೆಳೆದಿದ್ದಾರೆ. ಕಾರ್ಯಕರ್ತರ ಸಂಘಟನೆಯಿಂದ ಲೋಕಸಭೆ, ಜಿ.ಪಂ ತಾ.ಪಂ ಚುನಾವಣೆಯಲ್ಲಿ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಈಗ ರಾಜ್ಯಾಧ್ಯಕ್ಷರಾಗಿರುವುದು ಇದೊಂದು ಸವಾಲು, ಇದನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಾರೆ. ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷರಾಗಿದ್ದ ವೇಳೆ ಒಳ್ಳೆಯ ಕೆಲಸ ಮಾಡಿದ್ದರು. ಈಶ್ವರಪ್ಪ, ಅನಂತಕುಮಾರ್, ಬಿ ಬಿ ಶಿವಪ್ಪ ಅಂತಹವರು ಕೂಡ ಪಕ್ಷ ಸಂಘಟನೆ ಮಾಡಿದ್ದಾರೆ ಎಂದರು.
ವಿಜಯೇಂದ್ರ ಸಂಘಟನೆಗೆ ಶಕ್ತಿ ತುಂಬುವ ಕೆಲಸ ಮಾಡುತ್ತಾರೆ. ರಾಜಕಾರಣ ಒಂದು ಸವಾಲಾಗಿದ್ದು, ನಮ್ಮ ಉದ್ದೇಶ ಸ್ಪಷ್ಟವಾಗಿದೆ. ಅಧಿಕಾರ ಇರಲಿ, ಇಲ್ಲದಿರಲಿ, ಹಿರಿಯರ ಜೊತೆ ಸೇರಿ ಪಕ್ಷ ಸಂಘಟನೆ ಮಾಡಿಕೊಂಡು ಹೋಗುತ್ತಾರೆ. ರಾಜಕಾರಣನೇ ಒಂದು ಪರೀಕ್ಷೆ ಇದ್ದಂತೆ, ವಿಜಯೇಂದ್ರ ಸವಾಲಾಗಿ ಸ್ವೀಕಾರ ಮಾಡುತ್ತಾರೆ. ವಿಜಯೇಂದ್ರ ಅಧ್ಯಕ್ಷ ಆಗ್ತಾರೆ ಎಂಬುದು ಚರ್ಚೆಯಲ್ಲಿತ್ತು. ದೀಪಾವಳಿ ಸಂದರ್ಭದಲ್ಲಿ ಸಂಘಟನೆ ಶಕ್ತಿ ತುಂಬಿದೆ. ವಿಜಯೇಂದ್ರ ಮುಖಾಂತರ ನಮ್ಮ ಕುಟುಂಬಕ್ಕೆ ಮತ್ತೊಂದು ಅವಕಾಶ ಸಿಕ್ಕಿದೆ. ಇದನ್ನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಮರ್ಪಕವಾಗಿ ಬಳಸಿಕೊಂಡು 28 ಸ್ಥಾನಗಳನ್ನು ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.