ಶಿವಮೊಗ್ಗ :ಕರ್ತವ್ಯದ ಮೇಲಿದ್ದ ಪೊಲೀಸ್ ಮುಖ್ಯ ಪೇದೆಯ ಮೇಲೆ ರೌಡಿ ಶೀಟರ್ನೊಬ್ಬ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಪೊಲೀಸ್ ಮುಖ್ಯಪೇದೆ ಮೇಲೆ ರೌಡಿ ಶೀಟರ್ನಿಂದ ಹಲ್ಲೆ
ಪೊಲೀಸ್ ಮುಖ್ಯ ಪೇದೆಯ ಮೇಲೆ ರೌಡಿ ಶೀಟರ್ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯ ಮುಖ್ಯ ಪೇದೆ ಅರುಣ್ ಹಲ್ಲೆಗೆ ಒಳಗಾದವರು. ಅರುಣ್ ನಿನ್ನೆ ರಾತ್ರಿ ಕರ್ತವ್ಯದ ಮೇಲೆ ಶಿವಮೊಗ್ಗ ಹೊರ ವಲಯ ಗಾಡಿಕೊಪ್ಪದ ಯುಟಿಪಿ ಚಾನಲ್ ಬಳಿ ಹೋಗುವಾಗ ಈ ಘಟನೆ ನಡೆದಿದೆ. ರೌಡಿಶೀಟರ್ ಪ್ರವೀಣ್ ಮತ್ತು ಸಂಗಡಿಗರು ಸ್ಕೂಟಿಯನ್ನು ಅಡ್ಡಾದಿಡ್ಡಿ ಓಡಿಸಿದ್ದಾರೆ. ಇದನ್ನು ಪ್ರಶ್ನೆ ಮಾಡಿದ ಪೊಲೀಸ್ ಪೇದೆ ಅರುಣ್ಗೆ ಅದನ್ನು ಕೇಳಲು ನೀನು ಯಾರು ಅಂತ ಹೇಳಿ ಬಾಟಲಿಯಲ್ಲಿ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಅರುಣ್ ಜೊತೆಗಿದ್ದವರು ಬಿಡಿಸಲು ಹೋದಾಗ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ನಂತರ ಗಸ್ತಿನಲ್ಲಿದ್ದ ಪೊಲೀಸ್ ವಾಹನ ಕಂಡು ಪರಾರಿಯಾಗಿದ್ದಾರೆ. ತಕ್ಷಣ ಅರುಣ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ರೌಡಿ ಶೀಟರ್ ಪ್ರವೀಣನ ಸಹಚರರಿಬ್ಬರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.