ಶಿವಮೊಗ್ಗ : ತಮ್ಮ ಹಣವನ್ನು ಸೇಫ್ ಎಂದು ಗ್ರಾಹಕರು ಬ್ಯಾಂಕ್ನಲ್ಲಿ ಇಟ್ಟರೆ, ಹಣ ಸಂರಕ್ಷಿಸಬೇಕಾದ ಬ್ಯಾಂಕ್ ಸಿಬ್ಬಂದಿಯೇ ದುರುಪಯೋಗಪಡಿಸಿಕೊಂಡು ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಪ್ರಕರಣದ ಸಂಬಂಧ ಹೊಸನಗರ ತಾಲೂಕಿನ ನಗರ ಹೋಬಳಿಯ ಕೆನರಾ ಬ್ಯಾಂಕ್ನ ಸಹಾಯಕ ಬ್ಯಾಂಕ್ ಮ್ಯಾನೇಜರ್ ಸುನೀಲ್ ತೀರ್ಥಹಳ್ಳಿ ಎಂಬುವರನ್ನು ಬಂಧಿಸಲಾಗಿದೆ.
ಸುನೀಲ್ ಅವರು ಕಳೆದ 3 ತಿಂಗಳಿಂದ ಯಡೂರಿನ ಕೆನರಾ ಬ್ಯಾಂಕ್ಗೆ ಸಹಾಯಕ ಬ್ಯಾಂಕ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಡೂರಿನ ಗಣೇಶ್ ಜಿ.ಎಸ್ ಗೌಡ ಎಂಬುವರು ವಿದೇಶದಲ್ಲಿ ನೆಲೆಸಿದ್ದು, ಈ ಬ್ಯಾಂಕ್ನಲ್ಲಿ NRE (NON RESIDENT EXTERNAL TERM DOPOSITE) ಅಡಿ ಒಟ್ಟು 8 ಡೆಪಾಸಿಟ್ ಖಾತೆಯನ್ನು ಹೊಂದಿದ್ದಾರೆ. ತಮ್ಮ ಖಾತೆಯಲ್ಲಿ ಒಟ್ಟು 1 ಕೋಟಿ ಹಣ ಇಲ್ಲವೆಂದು ಇ ಮೇಲ್ ಮೂಲಕ ಶಿವಮೊಗ್ಗದ ಪ್ರಾದೇಶಿಕ ಕಚೇರಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ದೇವರಾಜ್ ಅವರಿಗೆ ದೂರು ನೀಡಿದ್ದರು.
ಈ ಕುರಿತು ಬ್ಯಾಂಕ್ ಮ್ಯಾನೇಜರ್ ಅನುಮಾನಗೊಂಡು ಪರಿಶೀಲಿಸಿದ್ದು, ಹಣ ಕಾಣೆಯಾಗಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 23 ರಂದು ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಗಣೇಶ್ ಅವರ ಎನ್ಆರ್ಇ ಖಾತೆಯಿಂದ ಯಾರಿಗೂ ತಿಳಿಯುವುದಿಲ್ಲವೆಂದು ಅಕ್ರಮವಾಗಿ ಸಹಾಯಕ ಬ್ಯಾಂಕ್ ಮ್ಯಾನೇಜರ್ ಸುನೀಲ್ ತೀರ್ಥಹಳ್ಳಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದರು. ಡಿಸೆಂಬರ್ 1 ರಿಂದ ಡಿಸೆಂಬರ್ 15 ರ ತನಕ 10 ವರ್ಗಾವಣೆಗಳಲ್ಲಿ 49,87,874 ರೂ.ಗಳನ್ನು ಅಧಿಕಾರಿಗಳ ಲಾಗಿನ್ ಐಡಿಯಿಂದ ತಮ್ಮ ತಂದೆ ಸುರೇಶ್ ಅವರಿಗೆ ಸೇರಿದ ಕೋಣಂದೂರು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಅದೇ ರೀತಿ ತಮ್ಮ ಪತ್ನಿ ವಿದ್ಯಾ ಅವರ ಎಸ್ ಬ್ಯಾಂಕ್ ಖಾತೆಗೂ ಹಣ ವರ್ಗಾವಣೆ ಮಾಡಿದ್ದು, ಬಳಿಕ ಗ್ರೋ ಸ್ಟಾಕ್ ಮುಖಾಂತರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.