ಶಿವಮೊಗ್ಗ :ಭದ್ರಾ ಜಲಾಶಯ ಕಾಮಗಾರಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಹಾಗಾಗಿ, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಭದ್ರಾ ಡ್ಯಾಂ ಗೇಟ್ ಮುಂದೆ ರೈತರು ಪ್ರತಿಭಟನೆ ನಡೆಸಿದ್ದಾರೆ. ವಿಶ್ವಬ್ಯಾಂಕ್ ನೆರವಿನೊಂದಿಗೆ ಭದ್ರಾ ಜಲಾಶಯದಲ್ಲಿ ಕೈಗೊಂಡಿರುವ ದುರಸ್ತಿ ಕಾಮಗಾರಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಅವರು, ಕೂಡಲೇ ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಜಲಾಶಯದ ತಳಭಾಗದ ದುರಸ್ತಿ ಕಾಮಗಾರಿಯು ಅವೈಜ್ಞಾನಿಕವಾಗಿ ನಡೆದಿದೆ. ಇದರಿಂದಾಗಿ ಜಲಾಶಯ ತಡೆಗೋಡೆಗೆ ಹಾನಿಯಾಗಿದೆ. ಇದರಿಂದ ವಿಪರೀತ ನೀರು ಸೋರಿಕೆಯಾಗುತ್ತಿದೆ. ಇದು ಹೀಗೆ ಮುಂದುವರಿದರೆ ಡ್ಯಾಂಗೆ ಹಾನಿಯಾಗುವ ಸಂಭವವೂ ಇದೆ. ಈ ಕಾಮಗಾರಿಯ ಬಗ್ಗೆ ಯಾವುದೇ ತಜ್ಞರ ಒಪ್ಪಿಗೆ ಪಡೆಯದೇ ಹಣ ದೋಚಲೆಂದೇ ಕೃತಕ ಯೋಜನೆಯನ್ನು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.