ಕರ್ನಾಟಕ

karnataka

By

Published : Mar 24, 2023, 2:01 PM IST

ETV Bharat / state

ಅಮಿತ್ ಶಾ ಸಮ್ಮುಖದಲ್ಲಿ 'ರಕ್ಷಾ ವಿಶ್ವ ವಿದ್ಯಾಲಯ' ಸ್ಥಾಪನೆಗೆ ಒಡಂಬಡಿಕೆ

ಕರ್ನಾಟಕದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಸ್ಥಾಪನೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು.

raksha university in karnataka
ರಕ್ಷಾ ವಿಶ್ವ ವಿದ್ಯಾಲಯದ ಸ್ಥಾಪನೆಗೆ ಒಡಂಬಡಿಕೆ

ಬೆಂಗಳೂರು: ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕರ್ನಾಟಕ ಅಧ್ಯಯನ ಕೇಂದ್ರವನ್ನು ಕರ್ನಾಟಕದ ಶಿವಮೊಗ್ಗ ನಗರದಲ್ಲಿ ಸ್ಥಾಪಿಸಲು ಇಂದು ಕರ್ನಾಟಕ ಸರ್ಕಾರ ಹಾಗೂ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಜತೆಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲಾಯಿತು.

ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಉಪಸ್ಥಿತಿಯಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿ ಬಿಮಲ್ ಎನ್.ಪಟೇಲ್ ಹಾಗೂ ರಾಜ್ಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ (ಒಳಾಡಳಿತ) ಕರ್ನಾಟಕ ಸರ್ಕಾರ ಇವರು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು. ಇದರಿಂದ ದಕ್ಷಿಣ ಭಾರತದಲ್ಲಿ ರಕ್ಷಾ ವಿಶ್ವ ವಿದ್ಯಾಲಯದ ಅಧ್ಯಯನ ಕೇಂದ್ರ ಹೊಂದಿದ ಮೂರನೇ ರಾಜ್ಯ ಕರ್ನಾಟಕವಾದಂತಾಗಿದೆ.

ಒಡಂಬಡಿಕೆ ನಂತರ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, "ನಾಡಿನ ಯುವ ಜನತೆಗೆ ಭದ್ರತೆ ಹಾಗೂ ಪೊಲೀಸ್ ಸೇವೆಗಳ ಕ್ಷೇತ್ರದಲ್ಲಿ ಅತ್ಯಾಧುನಿಕ ತರಬೇತಿ, ಶಿಕ್ಷಣ, ಸಂಶೋಧನೆ ಇತ್ಯಾದಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಹಾಗೂ ಈ ಕ್ಷೇತ್ರದಲ್ಲಿ ಅಗತ್ಯವಾಗಿ ಬೇಕಾಗಿದ್ದ ಮಾನವ ಸಂಪನ್ಮೂಲವನ್ನು ಸೃಜಿಸಲು ಈ ವಿಶ್ವವಿದ್ಯಾಲಯ ಮಹತ್ವದ ಕಾಣಿಕೆ ನೀಡಲಿದೆ" ಎಂದರು.

"ಶಿವಮೊಗ್ಗದಲ್ಲಿ ಸ್ಥಾಪಿತವಾಗಲಿರುವ ಪ್ರತಿಷ್ಠಿತ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ 8 ಎಕರೆ ಪ್ರದೇಶದಲ್ಲಿ ಪ್ರಸ್ತುತ, ಕೇಂದ್ರೀಯ ವಿದ್ಯಾಲಯದಲ್ಲಿರುವ ಸುಸಜ್ಜಿತ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಈ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡಲಿದೆ. ರಾಷ್ಟ್ರದ ಪ್ರತಿಷ್ಠಿತ ವಿಶ್ವ ವಿದ್ಯಾಲಯದ ಅಧ್ಯಯನ ಕೇಂದ್ರ ಪ್ರಾರಂಭಿಕವಾಗಿ ಡಿಪ್ಲೊಮೊ, ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್​ಗಳಿಗೆ ಶಿಕ್ಷಣ ನೀಡಲಿದೆ. ಪೊಲೀಸ್ ವಿಜ್ಞಾನ ಮತ್ತು ಆಡಳಿತ, ಸೈಬರ್ ಸೆಕ್ಯೂರಿಟಿ ಮತ್ತು ಡಿಜಿಟಲ್ ಸಂಶೋಧನೆ, ರಕ್ಷಣಾ ನಿರ್ವಹಣೆ, ನ್ಯಾಯ ಅಪರಾಧಿಕಾರಣ, ಕರಾವಳಿ ಸಂರಕ್ಷಣೆ, ರಸ್ತಾ ಸುರಕ್ಷತೆ, ದೈಹಿಕ ಶಿಕ್ಷಣ ಸಂಬಂಧ ವಿಷಯ ಒಳಗೊಂಡಂತೆ ಪದವಿ ಹಾಗೂ ಸರ್ಟಿಫಿಕೇಟ್ ಅನ್ನು ಪ್ರದಾನ ಮಾಡಲಾಗುವುದು" ಎಂದರು.

"ರಾಜ್ಯದ ರಕ್ಷಾ ವಿಶ್ವ ವಿದ್ಯಾಲಯದ ಕೇಂದ್ರವು, ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಶಿಕ್ಷಣ, ಅಧ್ಯಯನ ಕೇಂದ್ರವಾಗಿ ಕಾರ್ಯ ನಿರ್ವಹಿಸುವಲ್ಲದೆ ಪೊಲೀಸ್ ಇಲಾಖೆಗೆ ವಿವಿಧ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳಿಗೆ ತರಬೇತಿ ಹಾಗೂ ಕೋಚಿಂಗ್ ಕೇಂದ್ರವಾಗಿಯೂ ಕಾರ್ಯ ನಿರ್ವಹಿಸಲಿದೆ. ಶಿವಮೊಗ್ಗದ ರಕ್ಷಾ ವಿಶ್ವ ವಿದ್ಯಾಲಯದ ಕೇಂದ್ರ ರಕ್ಷಣಾ ವಲಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಶಿಕ್ಷಣ ಪ್ರದಾನಕ್ಕೆ ಸಂಬಂಧಿಸಿದಂತೆ, ವಿಶ್ವ ಮಟ್ಟದ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ. ಇಂತಹ ಕೇಂದ್ರವನ್ನು ರಾಜ್ಯದ ಶಿವಮೊಗ್ಗ ಜಿಲ್ಲೆಗೆ ಮಂಜೂರಾತಿ ನೀಡಿದ ಕೇಂದ್ರ ಗೃಹ ಇಲಾಖೆ ಸಚಿವ ಅಮಿತ್​ ಶಾ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಆರಗ ಜ್ಞಾನೇಂದ್ರ ತಿಳಿಸಿದರು.

"ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಕ್ಷಾ ವಿಶ್ವವಿದ್ಯಾಲಯವನ್ನು, ರಾಷ್ಟ್ರದ ರಕ್ಷಣಾ ಸಂಬಂಧಿ ಶೈಕ್ಷಣಿಕ ಕ್ಷೇತ್ರದ ಮಹತ್ವದ ಸಂಸ್ಥೆಯಾಗಲಿದೆ ಎಂದಿದ್ದಾರೆ. ಅಂತಹ ಒಂದು ಸಂಸ್ಥೆಯನ್ನು ಕೇಂದ್ರವು ರಾಜ್ಯಕ್ಕೆ ಅದರಲ್ಲಿಯೂ ಶಿವಮೊಗ್ಗ ಜಿಲ್ಲೆಯಲ್ಲಿ ಸ್ಥಾಪಿತವಾಗಿರುವುದು ಹೆಮ್ಮೆಯ ವಿಷಯ" ಎಂದು ಗೃಹ ಸಚಿವರು ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ:ಅತಂತ್ರ ವಿಧಾನಸಭೆ ಸೃಷ್ಟಿ ಬೇಡ, ಬಿಜೆಪಿ ಬಹುಮತದಿಂದ ಸರ್ಕಾರ ರಚಿಸಬೇಕು: ಅಮಿತ್ ಶಾ ಸೂಚನೆ

ABOUT THE AUTHOR

...view details