ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಮುಗಿಲೆತ್ತರಕ್ಕೆ ಬೆಳೆದು ನಿಂತಿದೆ ಅಂದು ಗಾಂಧೀಜಿ ನೆಟ್ಟಿದ್ದ ತೆಂಗಿನ ಮರ - 75ನೇ ಸ್ವಾತಂತ್ರ್ಯ ದಿನಾಚರಣೆ

ಮಹಾತ್ಮ ಗಾಂಧೀಜಿ ಶಿವಮೊಗ್ಗಕ್ಕೆ ಬಂದಾಗ, ಇಲ್ಲಿನ ಭೇಟಿಯ ನೆನಪಿನ ಸಲುವಾಗಿ ತೆಂಗಿನ ಮರವೊಂದನ್ನು ನೆಟ್ಟಿದ್ದರು. ಇದೀಗ ಆ ಮರ ಪ್ರತಿ ದಿನವೂ ಗಾಂಧೀಜಿಯನ್ನು ನೆನಪಿಸುತ್ತಿದೆ. ಎಲ್ಲರೂ ಈ ತೆಂಗಿನ ಮರವನ್ನು ನೋಡಿ ಇದು ಗಾಂಧೀಜಿ ನೆಟ್ಟಿರುವ ಮರ ಎಂದು ಸ್ಮರಿಸುತ್ತಾರೆ.

coconut tree planted by Gandhiji when he visit Shimoga
ಮುಗಿಲೆತ್ತರಕ್ಕೆ ಬೆಳೆದ ಗಾಂಧಿಜೀ ನೆಟ್ಟ ತೆಂಗಿನ ಮರ

By

Published : Aug 15, 2022, 3:31 PM IST

ಶಿವಮೊಗ್ಗ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಇಂದು ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ಗಾಂಧೀಜಿ ಅವರ ನೆನಪಿನ ಕುರುಹು ಇನ್ನೂ ಶಿವಮೊಗ್ಗ ನಗರದಲ್ಲಿ ಅವರನ್ನು ಪ್ರತಿದಿನ ನೆನಪಿಸುತ್ತಿದೆ. 1927ರಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದ ಗಾಂಧೀಜಿ ಕೆಲ ದಿನಗಳನ್ನು ಇಲ್ಲಿಯೇ ಕಳೆದಿದ್ದರು. ಇಲ್ಲಿಂದ ತೆರಳುವ ಮುನ್ನ ಅವರು ತಮ್ಮ ಶಿವಮೊಗ್ಗ ಭೇಟಿಯ ನೆನಪಿಗಾಗಿ ತೆಂಗಿನ ಮರವೊಂದನ್ನು ನೆಟ್ಟಿದ್ದರು.

1927ರಲ್ಲಿ ಶಿವಮೊಗ್ಗಕ್ಕೆ ಬಂದಿದ್ದ ಗಾಂಧೀಜಿ: 1924ರಲ್ಲಿ ಗಾಂಧೀಜಿಯವರು ಬೆಳಗಾವಿಯ ಅಧಿವೇಶನದಲ್ಲಿ ಭಾಗವಹಿಸಿದ್ದರು. ಅಂದು ಅವರನ್ನು ಭೇಟಿಯಾಗಿದ್ದ ಶಿವಮೊಗ್ಗದ ಮುಖಂಡರು ಹೇಗಾದರೂ ಮಾಡಿ ಅವರನ್ನು ಇಲ್ಲಿಗೆ ಕರೆದುಕೊಂಡು ಬರಬೇಕು ಎಂದು ತೀರ್ಮಾನಿಸಿದ್ದರು. ಅದರಂತೆ ಹಲವು ಪ್ರಯತ್ನದ ಬಳಿಕ ಗಾಂಧೀಜಿಯವರನ್ನು ಸಂಪರ್ಕಿಸಿದ ಪ್ರಮುಖರು, 1927ರಲ್ಲಿ ಅವರನ್ನು ಶಿವಮೊಗ್ಗಕ್ಕೆ ಕರೆತರುವಲ್ಲಿ ಯಶಸ್ವಿಯಾಗುತ್ತಾರೆ.

ಹಲವು ಕಡೆ ಗಾಂಧೀಜಿ ಪ್ರವಾಸ: 1927ರಲ್ಲಿ ಕಸ್ತೂರಬಾ ಅವರ ಜೊತೆ ಶಿವಮೊಗ್ಗಕ್ಕೆ ಆಗಮಿಸಿದ ಗಾಂಧೀಜಿಯವರು ಶಿವಮೊಗ್ಗದ ಇಂದಿನ ಬಾಲರಾಜ ಅರಸ್ ರಸ್ತೆಯಲ್ಲಿದ್ದ ನ್ಯಾಷನಲ್ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಜೊತೆಗೆ ಶಿವಮೊಗ್ಗ ಜಿಲ್ಲೆಯ ಆನಂದಪುರ, ನಗರ, ತೀರ್ಥಹಳ್ಳಿಗೆ ಪ್ರವಾಸ ಮಾಡಿ ಜನರನ್ನು ಸ್ವಾತಂತ್ರ್ಯ ಹೋರಾಟದ ಬಗ್ಗೆ ಉತ್ತೇಜಿಸಿದ್ದರು.

1927ರ ಆಗಸ್ಟ್ 14ರಂದು ಶಿವಮೊಗ್ಗದ ಪಾರ್ಕ್ ಜಾಗದಲ್ಲಿ ಮಹಾತ್ಮ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಅಂದು ಸಭೆಯನ್ನು ನಡೆಸಿದ್ದರು. ಸಭೆಯು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿತ್ತು. ಅವರು ಅಂದು ಸಭೆ ನಡೆಸಿದ್ದ ಆ ಪಾರ್ಕ್ ಇನ್ನೂ ಹಾಗೆಯೇ ಇದೆ. ಆದರೆ ಗಾಂಧೀಜಿ ಅವರ ನೆನಪಿಗಾಗಿ ಆ ಪಾರ್ಕ್​ಗೆ ಮಹಾತ್ಮ ಗಾಂಧಿ ಪಾರ್ಕ್ ಎಂದು ನಾಮಕರಣ ಮಾಡಲಾಗಿದೆ.

ಮುಗಿಲೆತ್ತರಕ್ಕೆ ಬೆಳೆದ ಗಾಂಧಿಜೀ ನೆಟ್ಟ ತೆಂಗಿನ ಮರ

ತೆಂಗಿನ ಮರ ನೆಟ್ಟಿದ್ದ ಗಾಂಧೀಜಿ, ಕಸ್ತೂರಬಾ: ಇದಲ್ಲದೆ ಗಾಂಧೀಜಿ ಅವರು ತಾವು ತಂಗಿದ್ದ ನ್ಯಾಷನಲ್ ಲಾಡ್ಜ್ ಮುಂಭಾಗದಲ್ಲಿ ಅಂದರೆ ಇಂದಿನ ಶಿವಮೊಗ್ಗದ ಮುಖ್ಯ ಪೋಸ್ಟ್ ಆಫೀಸ್ ಎದುರು ತಾವು ಹಾಗೂ ಕಸ್ತೂರಬಾ ಅವರು ಒಂದೊಂದು ತೆಂಗಿನ ಮರ ನೆಟ್ಟಿದ್ದರು. ಆ ತೆಂಗಿನ ಮರಗಳು ಇದೀಗ ಮುಗಿಲೆತ್ತರಕ್ಕೆ ಬೆಳೆದು ಗಾಂಧೀಜಿ ಅವರನ್ನು ಪ್ರತಿದಿನ ಸ್ಮರಿಸುವಂತೆ ಮಾಡಿವೆ.

ಇದನ್ನೂ ಓದಿ:1200 ವಿದ್ಯಾರ್ಥಿಗಳಿಂದ ರಚನೆಯಾಯ್ತು ಭಾರತದ ಭೂಪಟ.. ಮೊಳಗಿತು ರಾಷ್ಟ್ರಗೀತೆ

ಕಾಲಕ್ರಮೇಣ ನ್ಯಾಷನಲ್ ಲಾಡ್ಜ್ ನೆಲಸಮವಾಗಿದೆ. ಆದರೆ ತೆಂಗಿನ ಮರಗಳು ಮಾತ್ರ ಗಾಂಧೀಜಿ ಅವರ ನೆನಪಿನ ಕುರುಹಾಗಿ ಶಿವಮೊಗ್ಗದಲ್ಲಿ ಉಳಿದುಕೊಂಡಿವೆ. ಅಲ್ಲದೆ ಈ ತೆಂಗಿನ ಮರವನ್ನು ನೋಡಿದವರೆಲ್ಲರೂ ಆ ಕ್ಷಣದಲ್ಲಿ ಗಾಂಧೀಜಿ ಅವರನ್ನು ಸ್ಮರಿಸಿಕೊಳ್ಳದೇ ಇರಲಾರರು. ಅಷ್ಟೊಂದು ಪ್ರಸಿದ್ಧಿ ಪಡೆದಿವೆ ಗಾಂಧೀಜಿ ನೆಟ್ಟ ತೆಂಗಿನ ಮರಗಳು.

ABOUT THE AUTHOR

...view details